ಬಸವನಬಾಗೇವಾಡಿ: ಹೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಸಿದ್ರಾಮ ಬಿರಾದಾರ ಅವರು ಗುತ್ತಿಗೆದಾರನಿಂದ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಗುತ್ತಿಗೆದಾರ ಸಂತೋಷ ಕುಮಾರ ಹುಲಸೂರು ಅವರು ಕೈಗೊಂಡಿದ್ದ ಐದು ಕಾಮಗಾರಿಗಳ ₹2 ಲಕ್ಷ ಮೊತ್ತದ ಬಿಲ್‌ ಪಾವತಿಗೆ ಸಿದ್ರಾಮ ಬಿರಾದಾರ ಅವರು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಪೈಕಿ ಈಗಾಗಲೇ ₹5 ಸಾವಿರವನ್ನು ಪಡೆದಿದ್ದ ಅವರು, ಉಳಿದ ₹10 ಸಾವಿರವನ್ನು ತಮ್ಮ ಕಚೇರಿಯಲ್ಲೇ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ ಪುಟ್ಟ ಓಬಳರೆಡ್ಡಿ ಹಾಗೂ ವಸಂತ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ರಾಮಪ್ಪ ಸಾವಳಗಿ, ಎಸ್. ಬಿ. ಪಾಟೀಲ, ರಾಜಶೇಖರಯ್ಯ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

error: Content is protected !!