ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಗೆ ಮುನ್ನವೇ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಘಟನೆ ಹೊಸ ಆತಂಕಕ್ಕೆ ಕಾರಣವಾಗಿದ್ದು, ಇದೀಗ ಅದೇ ಸ್ಥಳದಲ್ಲಿ ಟೈಮರ್ ಕೂಡ ಪತ್ತೆಯಾಗಿರುವ ಮಾಹಿತಿ ಬಹಿರಂಗವಾಗಿದೆ. ಈ ಬೆಳವಣಿಗೆಯಿಂದ ಭದ್ರತಾ ವ್ಯವಸ್ಥೆಗಳ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಪ್ರಕರಣ ಉಗ್ರ ಸಂಚೋ ಎಂಬ ಅನುಮಾನಕ್ಕೂ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್, “ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿ ಬೆದರಿಕೆ ನೀಡಿದ್ದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಆರಂಭಕ್ಕೂ ಸುಮಾರು ಎರಡು ಗಂಟೆಗಳ ಮುನ್ನ ಬೆಳಿಗ್ಗೆ 9 ಗಂಟೆ ಸುಮಾರಿಗೆ ಜಿಲೆಟಿನ್ ಕಡ್ಡಿ ಪತ್ತೆಯಾಗಿತ್ತು. ನಂತರ ಅಲ್ಲಿಯೇ ಟೈಮರ್ ಕೂಡ ಸಿಕ್ಕಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ National Investigation Agency (ಎನ್‌ಐಎ) ಕೂಡ ತನಿಖೆಗೆ ಕೈಜೋಡಿಸಿದ್ದು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.

“ಪ್ರಧಾನಿ ಭಾಗವಹಿಸುವ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಕೇಂದ್ರದ ಭದ್ರತಾ ಸಂಸ್ಥೆಗಳು ಅತ್ಯುನ್ನತ ಮಟ್ಟದ ಭದ್ರತೆ ಒದಗಿಸುತ್ತವೆ. ಜಿಲೆಟಿನ್ ಪತ್ತೆಯಾದುದು ಒಳ್ಳೆಯ ಸಂಗತಿ. ಆದರೆ ಇದಕ್ಕೆ ಉಗ್ರ ಸಂಘಟನೆಗಳ ಸಂಪರ್ಕವಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯ ಹೊರಬರುತ್ತದೆ,” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಇದೇ ವೇಳೆ ಶೃಂಗೇರಿ ಕ್ಷೇತ್ರದ ಮರು ಎಣಿಕೆ ವಿವಾದದ ಕುರಿತೂ ಅವರು ಪ್ರತಿಕ್ರಿಯೆ ನೀಡಿದರು. “ಮರು ಎಣಿಕೆಯಲ್ಲಿ 250 ಮತಗಳು ಹೆಚ್ಚಾಗುತ್ತವೆ ಎಂದರೆ, ಮೊದಲ ಎಣಿಕೆಯಲ್ಲಿ ಲೋಪ ನಡೆದಿತ್ತು ಎಂದೇ ಅರ್ಥವಲ್ಲವೇ?” ಎಂದು ಪ್ರಶ್ನಿಸಿದರು. ಮತಯಂತ್ರಗಳ ಟ್ಯಾಂಪರಿಂಗ್ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಹಾಗೂ ಎಫ್‌ಎಸ್‌ಎಲ್‌ ತಂಡ ತನಿಖೆ ನಡೆಸುತ್ತಿದ್ದು, ಅಧಿಕಾರಿಗಳ ತಪ್ಪು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ವಿಳಂಬದ ಕುರಿತು ವಿರೋಧ ಪಕ್ಷಗಳು ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಅವರು, “ಸೋಲಿನ ಭೀತಿಯಿಂದ ಸರ್ಕಾರ ಚುನಾವಣೆ ಮುಂದೂಡುತ್ತಿದೆ ಎನ್ನುವುದು ಸರಿಯಲ್ಲ. ಜನಗಣತಿ ಸೇರಿದಂತೆ ಆಡಳಿತಾತ್ಮಕ ಕಾರಣಗಳಿಂದ ಕೆಲ ತೊಂದರೆಗಳಿವೆ. ಅವನ್ನು ಸರಿಪಡಿಸಿ ಶೀಘ್ರದಲ್ಲೇ ಚುನಾವಣೆ ನಡೆಸುತ್ತೇವೆ,” ಎಂದರು.

ಬೆಂಗಳೂರು ನಗರ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, “ಒಂದು ವಾರದಲ್ಲಿ ಡಿಪಿಆರ್ ಸಿದ್ಧವಾಗಲಿದೆ. 60-70 ಕಿಲೋಮೀಟರ್ ವಿಸ್ತರಣೆಗೊಂಡರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ,” ಎಂದು ಹೇಳಿದರು.

ಇನ್ನೊಂದೆಡೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಸಮರ್ಪಕ ಬೆಂಬಲ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಭ್ರಷ್ಟಾಚಾರ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅದನ್ನೇ ನೆಪ ಮಾಡಿಕೊಂಡು ಇಡೀ ಯೋಜನೆಯನ್ನು ದುರ್ಬಲಗೊಳಿಸುವುದು ಸರಿಯಲ್ಲ,” ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!