Categories: CrimeLatest

ಗೌರಿಬಿದನೂರಿನಲ್ಲಿ ಅಪಘಾತಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ

ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ

ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ ಸಂಭವಿಸಿದ್ದು, ನಾಲ್ಕು ವರ್ಷದ ಪುಟ್ಟ ಬಾಲಕಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಗೌರಿಬಿದನೂರು ನಗರದ ಬೆಂಗಳೂರು ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಗುಂಡಮಗೆರೆ ಗ್ರಾಮದ ತಿಮ್ಮಪ್ಪ ಹಾಗೂ ಗಂಗಮ್ಮ ದಂಪತಿಯ ಮೊಮ್ಮಗಳು ವೇದ (4) ಮೃತಪಟ್ಟಿದ್ದಾಳೆ.

ತಿಮ್ಮಪ್ಪ ಹಾಗೂ ಗಂಗಮ್ಮ ಅವರು ತಮ್ಮ ಮೊಮ್ಮಗಳು ವೇದಳನ್ನು ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ಗುಂಡಮಗೆರೆಯಿಂದ ಗೌರಿಬಿದನೂರು ಕಡೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೀಟ್ಸ್ ಕಂಪನಿಗೆ ಸೇರಿದೆ ಎನ್ನಲಾದ ಟ್ರ್ಯಾಕ್ಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ ಬಾಲಕಿ ವೇದಳ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಅಪಘಾತದ ಬಳಿಕ ಮಗುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಕೂಡಲೇ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಆದರೆ ಮಾರ್ಗಮಧ್ಯೆಯೇ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ತಾಯಿ-ತಂದೆಯಿಲ್ಲದ ಬಾಲಕಿಗೆ ಅಜ್ಜಿ-ತಾತನೇ ಆಸರೆ

ವೇದಳ ಕುಟುಂಬದ ಹಿನ್ನೆಲೆಯೂ ನೋವಿನಿಂದ ಕೂಡಿದೆ ಎನ್ನಲಾಗಿದೆ. ಬಾಲಕಿಯ ತಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ವೇದಳ ತಾಯಿ ಚೈತ್ರ ಅವರು ಆಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು ಎಂದು ಕುಟುಂಬಸ್ಥರ ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚೆಗಷ್ಟೇ ಚೈತ್ರ ಅವರ ವರ್ಷದ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದರು ಎನ್ನಲಾಗಿದೆ. ತಾಯಿ-ತಂದೆಯ ಅನುಪಸ್ಥಿತಿಯಲ್ಲಿ ವೇದಳನ್ನು ಅಜ್ಜಿ ಗಂಗಮ್ಮ ಹಾಗೂ ತಾತ ತಿಮ್ಮಪ್ಪ ಅವರು ಸಾಕುತ್ತಿದ್ದರು. ಮೊಮ್ಮಗಳನ್ನೇ ತಮ್ಮ ಬದುಕಿನ ಆಸರೆಯಾಗಿ ಕಂಡಿದ್ದ ಅಜ್ಜಿ-ತಾತ ಇದೀಗ ಆಕೆಯನ್ನು ಕಳೆದುಕೊಂಡಿರುವುದು ಕುಟುಂಬಕ್ಕೆ ಭರಿಸಲಾಗದ ನೋವನ್ನುಂಟು ಮಾಡಿದೆ.

ವರ್ಷದ ಕಾರ್ಯದ ಬೆನ್ನಲ್ಲೇ ಮೊಮ್ಮಗಳ ಸಾವು

ತಾಯಿಯ ವರ್ಷದ ಕಾರ್ಯ ನೆರವೇರಿಸಿದ ಬೆನ್ನಲ್ಲೇ ನಾಲ್ಕು ವರ್ಷದ ಮೊಮ್ಮಗಳೂ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೆಡೆ ಮಗಳನ್ನು ಕಳೆದುಕೊಂಡ ನೋವು, ಮತ್ತೊಂದೆಡೆ ಮೊಮ್ಮಗಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನದಿಂದ ಗುಂಡಮಗೆರೆ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಅಪಘಾತದಲ್ಲಿ ತಿಮ್ಮಪ್ಪ ಹಾಗೂ ಗಂಗಮ್ಮ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಪಘಾತ ತಡೆಗೆ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಗೌರಿಬಿದನೂರು ನಗರ ಹಾಗೂ ಪ್ರಮುಖ ರಸ್ತೆಗಳಲ್ಲಿನ ಅಪಘಾತಗಳ ಹಿನ್ನೆಲೆಯಲ್ಲಿ ವಾಹನಗಳ ವೇಗ ನಿಯಂತ್ರಣ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಅಪಘಾತಕ್ಕೆ ನಿಖರ ಕಾರಣವೇನು? ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿತೇ ಅಥವಾ ಇತರೆ ಕಾರಣಗಳಿವೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಪೊಲೀಸರು ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆಟವಾಡುತ್ತಾ, ಅಜ್ಜಿ-ತಾತನ ಮಡಿಲಲ್ಲಿ ಬೆಳೆಯಬೇಕಿದ್ದ ಕೇವಲ ನಾಲ್ಕು ವರ್ಷದ ಪುಟ್ಟ ವೇದಳ ಬದುಕು ರಸ್ತೆ ಅಪಘಾತದೊಂದಿಗೆ ದುರಂತ ಅಂತ್ಯ ಕಂಡಿರುವುದು ಸ್ಥಳೀಯರನ್ನು ಹಾಗೂ ಕುಟುಂಬಸ್ಥರನ್ನು ದುಃಖಕ್ಕೀಡು ಮಾಡಿದೆ.

ವರದಿ: ಅವಿನಾಶ್

ಭ್ರಷ್ಟರ ಬೇಟೆ

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಅನ್ಯಾಯ: ನೂರು ರೂಪಾಯಿಗೂ ಬೆಲೆಬಾಳದ ಶೂಗಳನ್ನು ವಿತರಿಸಿರುವ ಸರ್ಕಾರ, ಒಂದೇ ತಿಂಗಳಿಗೆ ಹಾಳದ ಶೂಗಳು..!

ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…

3 days ago

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: ಖರಾಬು ಜಮೀನು ದಾಖಲೆ ತಿದ್ದುಪಡಿಗೆ ಬೇಡಿಕೆ..!

ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…

3 days ago

ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದಕ್ಕೆ ರಕ್ತದೊಕುಳಿ: ಅಣ್ಣ–ತಮ್ಮಂದಿರ ಜಗಳದಲ್ಲಿ ತಂದೆ–ಮಗಳು ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ

ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…

3 days ago

ವಡ್ಡಗೆರೆ ವೀರನಾಗಮ್ಮ ದೇವಸ್ಥಾನ ಸೇರಿದಂತೆ 9 ದೇವಸ್ಥಾನಗಳಲ್ಲಿ ಕಳ್ಳತನ: ಅಂತಾರಾಜ್ಯ ಕಳ್ಳರ ಬಂಧನ, 21 ಕೆಜಿ ಬೆಳ್ಳಿ ಆಭರಣ ವಶ

ಪಾವಗಡ: ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದು, ಅವರಿಂದ 21…

3 days ago

ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿದ ಶೂ–ಸ್ಯಾಂಡಲ್ ಕಳಪೆ? ಸೆ.18ರೊಳಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಸೂಚನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2026–27ನೇ ಸಾಲಿನಲ್ಲಿ ಸರ್ಕಾರದಿಂದ ವಿತರಿಸಲಾಗಿರುವ ಶೂ ಮತ್ತು ಸ್ಯಾಂಡಲ್‌ಗಳ…

3 days ago

ಅಂಬೇಡ್ಕರ್ ವೃತ್ತದ ಬಳಿ ಭೀಕರ ಅಪಘಾತ: 8 ವರ್ಷದ ಬಾಲಕ ರಯಾನ್ ದುರ್ಮರಣ

ಗೌರಿಬಿದನೂರು: ನಗರದ ಅಂಬೇಡ್ಕರ್ ವೃತ್ತದ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ…

4 days ago