
ಕೊರಿಯಾ, ಕೆನಡಾ, ಯುಎಇ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ನೋಟು–ನಾಣ್ಯಗಳು ಪತ್ತೆ; ವಿದೇಶಗಳಲ್ಲೂ ನಾಗಾವಿ ಯಲ್ಲಮ್ಮ ದೇವಿಯ ಭಕ್ತರಿರುವುದಕ್ಕೆ ಸಾಕ್ಷಿ
ಚಿತ್ತಾಪುರ: ಇಲ್ಲಿನ ಐತಿಹಾಸಿಕ ಹಾಗೂ ಪ್ರಸಿದ್ಧ ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿ ಎಣಿಕೆ ವೇಳೆ ವಿವಿಧ ದೇಶಗಳ ವಿದೇಶಿ ಕರೆನ್ಸಿ ಹಾಗೂ ನಾಣ್ಯಗಳು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ.
ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕೊರಿಯಾ, ಕೆನಡಾ, ಯುಎಇ ಹಾಗೂ ಅಮೆರಿಕ ಸೇರಿದಂತೆ ಹಲವು ದೇಶಗಳ ನೋಟುಗಳು ಮತ್ತು ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ.
ಎಣಿಕೆ ವೇಳೆ ಕೊರಿಯಾದ 10 ಸಾವಿರ ಕರೆನ್ಸಿ (ಭಾರತೀಯ ಮೌಲ್ಯ ಸುಮಾರು ₹690), ಕೆನಡಾದ 5 ಸಿಂಕ್ ಡಾಲರ್ (ಸುಮಾರು ₹477), ಯುಎಇಯ 5 ಹಾಗೂ 10 ದಿರ್ಹಮ್ (ಕ್ರಮವಾಗಿ ಸುಮಾರು ₹129.81 ಮತ್ತು ₹259.62) ಪತ್ತೆಯಾಗಿವೆ.
ಇದರ ಜೊತೆಗೆ ಅಮೆರಿಕದ ಡಾಲರ್ಗಳ ನೋಟುಗಳು ಹಾಗೂ ನಾಣ್ಯಗಳು ಕೂಡ ಹುಂಡಿಯಲ್ಲಿ ದೊರೆತಿವೆ. ಅಮೆರಿಕದ ನೋಟುಗಳ ಭಾರತೀಯ ಮೌಲ್ಯ ಸುಮಾರು ₹14,584.40 ಆಗಿದ್ದು, ನಾಣ್ಯಗಳ ಮೌಲ್ಯ ಸುಮಾರು ₹1,000 ಎಂದು ತಿಳಿಸಲಾಗಿದೆ.
ಎಲ್ಲಾ ವಿದೇಶಿ ಕರೆನ್ಸಿಗಳನ್ನು ಭಾರತೀಯ ರೂಪಾಯಿ ಮೌಲ್ಯಕ್ಕೆ ಪರಿಗಣಿಸಿದಾಗ ಒಟ್ಟಾರೆಯಾಗಿ ಸುಮಾರು ₹17,140.91 ಮೌಲ್ಯದ ವಿದೇಶಿ ಹಣ ಹುಂಡಿಯಲ್ಲಿ ಜಮೆಯಾಗಿರುವುದು ಕಂಡುಬಂದಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿಯೂ ಪತ್ತೆಯಾಗಿತ್ತು ವಿದೇಶಿ ಹಣ
ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿ ಎಣಿಕೆ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿಯ ಹುಂಡಿ ಎಣಿಕೆಯ ಸಂದರ್ಭದಲ್ಲೂ ವಿದೇಶಿ ಹಣ ದೊರೆತಿತ್ತು.
ಈ ಬಾರಿಯೂ ನಾಲ್ಕೈದು ದೇಶಗಳ ಕರೆನ್ಸಿ ಹಾಗೂ ನಾಣ್ಯಗಳು ಪತ್ತೆಯಾಗಿರುವುದು ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನಾಗಾವಿ ಯಲ್ಲಮ್ಮ ದೇವಿಯ ಭಕ್ತರು ಇದ್ದಾರೆ ಎಂಬುದಕ್ಕೆ ಹುಂಡಿಯಲ್ಲಿ ಪತ್ತೆಯಾದ ವಿದೇಶಿ ಹಣ ಮತ್ತೊಮ್ಮೆ ಸಾಕ್ಷಿಯಾಗಿದೆ.
ವಿದೇಶಿ ಕರೆನ್ಸಿಗಳ ಪತ್ತೆಯ ವಿಚಾರ ಇದೀಗ ನಾಗಾವಿ ನಾಡಿನ ಜನತೆ ಹಾಗೂ ಭಕ್ತರ ನಡುವೆ ಕುತೂಹಲದ ಚರ್ಚೆಗೆ ಗ್ರಾಸವಾಗಿದೆ.






