ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿಗೆ ಪಾರ್ಸಲ್ ಡೆಲಿವರಿ ವೇಳೆ ಆತಂಕಕಾರಿ ಅನುಭವ ಎದುರಾಗಿರುವ ಘಟನೆ ಬೆಳಕಿಗೆ ಬಂದಿದೆ. ಉಬರ್ ಪಾರ್ಸಲ್ ಸೇವೆಯ ಮೂಲಕ ಸ್ನೇಹಿತೆಯ ಜ್ಯಾಕೆಟ್ ಹಿಂತಿರುಗಿಸಲು ಬುಕ್ಕಿಂಗ್ ಮಾಡಿದ್ದ ವೇಳೆ ಡೆಲಿವರಿ ಎಕ್ಸಿಕ್ಯೂಟಿವ್ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಆನೇರಿ ಠಕ್ಕರ್, ಡೆಲಿವರಿ ಸಿಬ್ಬಂದಿ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದಾನೆ ಎಂದು ತಿಳಿಸಿದ್ದಾರೆ. ಪಾರ್ಸಲ್ ಹಸ್ತಾಂತರಿಸಿದ ನಂತರ ಅಲ್ಲಿಂದ ತೆರಳಬೇಕಿದ್ದ ಆತ, ಮನೆ ಒಳಗೆ ಫೋನ್ ಚಾರ್ಜ್ ಮಾಡಲು ಅವಕಾಶ ನೀಡುವಂತೆ ಕೇಳಿದ್ದಾನೆ. ಅಲ್ಲದೆ, ಬಾಲ್ಕನಿಯಲ್ಲಿ ಸಿಗರೇಟ್ ಸೇದಲು ಅನುಮತಿ ನೀಡುವಂತೆಯೂ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಡೆಲಿವರಿ ಸಿಬ್ಬಂದಿಯ ಈ ವರ್ತನೆಯಿಂದ ಅನುಮಾನಗೊಂಡ ಯುವತಿ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಸೆಕ್ಯೂರಿಟಿ ಗಾರ್ಡ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಂಡಿದ್ದಾರೆ.

ಈ ಘಟನೆ ನಗರದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಆನ್‌ಲೈನ್ ಡೆಲಿವರಿ ಸೇವೆಗಳ ವಿಶ್ವಾಸಾರ್ಹತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ. ಒಂಟಿಯಾಗಿ ವಾಸಿಸುವ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

Related News

error: Content is protected !!