ಹರಪನಹಳ್ಳಿ: ಲಾಕಪ್‌ನಲ್ಲಿ ಮೃತಪಟ್ಟ ಕಟ್ಟಡ ಕಾರ್ಮಿಕ ಖಲೀಲ್ ಸಾಬ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಪತಿಯನ್ನು ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಪತ್ನಿ ಶೈನಾಜ್ ಬೇಗಂ, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗೆ ಕಠಿಣ ಶಿಕ್ಷೆ, ಅಗತ್ಯವಿದ್ದರೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹರಪನಹಳ್ಳಿಯ ಮೆಹಬೂಬ್ ನಗರದಲ್ಲಿರುವ ಖಲೀಲ್ ಸಾಬ್ ಅವರ ನಿವಾಸಕ್ಕೆ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಂ. ನಬಿ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಶೈನಾಜ್ ಬೇಗಂ, “ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣ ಬುದ್ಧಿವಾದ ಹೇಳುವಂತೆ ನನ್ನ ಪತಿಯನ್ನು ಠಾಣೆಗೆ ಕರೆದುಕೊಂಡು ಹೋದರು. ಆದರೆ ಅಲ್ಲೇ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದಾರೆ” ಎಂದು ಆರೋಪಿಸಿದರು.

ವಾಹನದ ಹಿಂದೆ ಮಕ್ಕಳೊಂದಿಗೆ ಓಡಿದೆ

“ನನ್ನ ಪತಿ ಠಾಣೆಯಲ್ಲಿಯೇ ಮೃತಪಟ್ಟಿದ್ದರೂ ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವಂತೆ ಸರಕು ಸಾಗಾಣಿಕೆ ವಾಹನದಲ್ಲಿ ಕರೆದೊಯ್ದರು. ಅವರು ಮೃತದೇಹವನ್ನು ಎಲ್ಲೋ ಬಿಸಾಡಿಬಿಡುತ್ತಾರೆ ಎಂಬ ಆತಂಕದಿಂದ ಇಬ್ಬರು ಮಕ್ಕಳನ್ನು ಕರೆದುಕೊಂಡು ವಾಹನದ ಹಿಂದೆ ಓಡಿದೆ. ಆಸ್ಪತ್ರೆಯಲ್ಲಿ ನನ್ನ ಪತಿಯ ಬಾಯಿ ಹಾಗೂ ಕಿವಿಯಿಂದ ರಕ್ತಸ್ರಾವವಾಗಿರುವುದನ್ನು ನೋಡಿದ್ದೇನೆ. ನನಗೆ ಯಾವುದೇ ಪರಿಹಾರ ಬೇಡ, ತಪ್ಪಿತಸ್ಥರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಅವರು ಕಣ್ಣೀರಿಟ್ಟರು.

ಪೊಲೀಸರ ಹೇಳಿಕೆ ಸುಳ್ಳು ಎಂದು ಆರೋಪ

“ನನ್ನ ಪತಿ ಕಟ್ಟಡ ಕಾರ್ಮಿಕರಾಗಿದ್ದು, ಆರೋಗ್ಯವಾಗಿದ್ದರು. ಶೌಚಾಲಯಕ್ಕೆ ಹೋಗುವ ವೇಳೆ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂಬ ಪೊಲೀಸರ ಹೇಳಿಕೆ ಸಂಪೂರ್ಣ ಸುಳ್ಳು. ಈ ಪ್ರಕರಣದಲ್ಲಿ ನ್ಯಾಯ ದೊರೆಯದಿದ್ದರೆ ಠಾಣೆ ಎದುರು ಧರಣಿ ನಡೆಸುತ್ತೇನೆ” ಎಂದು ಶೈನಾಜ್ ಬೇಗಂ ಎಚ್ಚರಿಸಿದರು.

ಸಿಸಿ ಟಿವಿ ದೃಶ್ಯ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಲು ಆಗ್ರಹ

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಂ. ನೂರ್ ಅಹಮದ್, “ಘಟನೆ ನಡೆದು ನಾಲ್ಕು ದಿನ ಕಳೆದರೂ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಠಾಣೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ. ಪ್ರಕರಣದ ಬಗ್ಗೆ ಇದುವರೆಗೆ ಸಮಗ್ರ ತನಿಖೆ ನಡೆದಿರುವ ಲಕ್ಷಣ ಕಾಣುತ್ತಿಲ್ಲ” ಎಂದು ಆರೋಪಿಸಿದರು.

ಖಲೀಲ್ ಸಾಬ್ ಕುಟುಂಬದ ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ ಅವರು, “ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಕುಟುಂಬದ ಜೊತೆ ನಿಲ್ಲುತ್ತೇನೆ. ಎರಡು ದಿನಗಳಲ್ಲಿ ತನಿಖೆಯ ಪ್ರಗತಿ ಕುರಿತು ಸ್ಪಷ್ಟ ಮಾಹಿತಿ ನೀಡದಿದ್ದರೆ ಕುಟುಂಬದವರೊಂದಿಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ವಿಷಯವನ್ನು ತಂದು ಪೊಲೀಸ್ ಇಲಾಖೆಯ ವೈಫಲ್ಯದ ಕುರಿತು ದೂರು ಸಲ್ಲಿಸಲಾಗುವುದು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ನ್ಯಾಯಬೆಲೆ ಇಸ್ಮಾಯಿಲ್, ಬಶೀರ್ ಅಹಮದ್, ಎಲ್ಲಪ್ಪ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Related News

error: Content is protected !!