ಚಿಕ್ಕಬಳ್ಳಾಪುರ: ಹೆಣ್ಣು ಮಗು ಜನಿಸಿದ್ದನ್ನು ಒಪ್ಪಿಕೊಳ್ಳಲಾಗದೆ ಸ್ವಂತ ತಂದೆಯೇ ಕೇವಲ 13 ದಿನದ ಹಸುಗೂಸನ್ನು ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಮ್ರಾನ್ ಮತ್ತು ಮುಸ್ಕಾನ್ ದಂಪತಿಗೆ 13 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗು ಹುಟ್ಟಿರುವುದರ ಬಗ್ಗೆ ಅಸಮಾಧಾನ ಹೊಂದಿದ್ದ ತಂದೆ ಇಮ್ರಾನ್, ಬುಧವಾರ ತಡರಾತ್ರಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ, ತಾಯಿ ಮುಸ್ಕಾನ್ ಪಕ್ಕದಲ್ಲಿ ಮಲಗಿದ್ದ ಕಂದಮ್ಮನನ್ನು ಇಮ್ರಾನ್ ಯಾರಿಗೂ ತಿಳಿಯದಂತೆ ಎತ್ತಿಕೊಂಡು ಹೋಗಿ ಮನೆಯ ಅಂಗಳದಲ್ಲಿದ್ದ ನೀರಿನ ಸಂಪ್‌ಗೆ ಎಸೆದಿದ್ದಾನೆ ಎನ್ನಲಾಗಿದೆ. ಬಳಿಕ ಮಗು ಕಾಣೆಯಾಗಿರುವ ವಿಚಾರ ತಿಳಿದಾಗ, ತನಗೆ ಏನೂ ಗೊತ್ತಿಲ್ಲವೆಂಬಂತೆ ಮನೆಯವರೊಂದಿಗೆ ಸೇರಿ ಮಗುವಿಗಾಗಿ ಹುಡುಕಾಟ ನಡೆಸುವ ನಾಟಕವಾಡಿದ್ದಾನೆ.

ಮಗು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಅನುಮಾನ ಮೂಡಿದೆ. ನಂತರ ನೀರಿನ ಸಂಪ್‌ನಲ್ಲಿದ್ದ ನೀರನ್ನು ಹೊರಹಾಕಿ ಪರಿಶೀಲಿಸಿದಾಗ, ಕಂದಮ್ಮನ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ರಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!