ಹೈದರಾಬಾದ್: ತೆಲಂಗಾಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಡಿಎಸ್ಪಿಯೊಬ್ಬರ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಬಯಲಾಗಿದೆ. ಹೈದರಾಬಾದ್ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಸಂಕೀರೆಡ್ಡಿ ಭೀಮ್ ರೆಡ್ಡಿ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜುಲೈ 2ರಂದು ಏಕಕಾಲದಲ್ಲಿ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಭೀಮ್ ರೆಡ್ಡಿ ಅವರ ನಿವಾಸ, ಕಚೇರಿ, ಸ್ನೇಹಿತರ ಮನೆಗಳು ಹಾಗೂ ಬೇನಾಮಿ ಆಸ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮಾರ್ಗಗಳಿಂದ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿರುವುದನ್ನು ಪತ್ತೆಹಚ್ಚಿದ್ದಾರೆ.
ಶೋಧದ ವೇಳೆ ಸುಮಾರು ₹200 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಹೈದರಾಬಾದ್ನ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಹಾಗೂ ತೆಲ್ಲಾಪುರದಂತಹ ದುಬಾರಿ ಪ್ರದೇಶಗಳಲ್ಲಿ ಐಷಾರಾಮಿ ವಿಲ್ಲಾಗಳು, ಹಲವು ಫ್ಲಾಟ್ಗಳು, ಜಿ+2 ಪೆಂಟ್ಹೌಸ್ ಹಾಗೂ ಸುಮಾರು 3,000 ಚದರ ಅಡಿ ವಾಣಿಜ್ಯ ಕಟ್ಟಡದ ದಾಖಲೆಗಳು ಸಿಕ್ಕಿವೆ.
ಇದಲ್ಲದೆ, ಹೈದರಾಬಾದ್ ಸುತ್ತಮುತ್ತ ಹಲವು ಓಪನ್ ಪ್ಲಾಟ್ಗಳ ಜೊತೆಗೆ ಕರ್ನಾಟಕದಲ್ಲಿ 44 ಎಕರೆ ಹಾಗೂ ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ 1 ಎಕರೆ ಸೇರಿದಂತೆ ಒಟ್ಟು 50 ಎಕರೆಗೂ ಅಧಿಕ ಕೃಷಿ ಭೂಮಿಯ ದಾಖಲೆಗಳು ಅಧಿಕಾರಿಗಳ ಕೈ ಸೇರಿವೆ. ಶೋಧದ ವೇಳೆ ಕೆಜಿಗಟ್ಟಲೆ ಚಿನ್ನ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಡಿಎಸ್ಪಿ ಸಂಕೀರೆಡ್ಡಿ ಭೀಮ್ ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಈ ಬೃಹತ್ ಅಕ್ರಮ ಆಸ್ತಿ ಪ್ರಕರಣ ತೆಲಂಗಾಣ ಪೊಲೀಸ್ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
