
ಶಹಾಪುರ (ಜುಲೈ 9): ಥಾಣೆ ಜಿಲ್ಲೆಯ ಶಹಾಪುರ ಪಟ್ಟಣದ ಖಾಸಗಿ ಶಾಲೆಯಲ್ಲಿ 5ರಿಂದ 10ನೇ ತರಗತಿಯ ಬಾಲಕಿಯರ ಮೇಲೆ ಅಸಭ್ಯತೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಘಟನೆ ರಾಜ್ಯದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ಪೋಷಕರ ನೀಡಿದ ದೂರಿನ ಮೇರೆಗೆ, ಶಾಲೆಯ ಪ್ರಾಂಶುಪಾಲರು, ನಾಲ್ವರು ಶಿಕ್ಷಕರು, ಮಹಿಳಾ ಸಹಾಯಕರು ಮತ್ತು ಟ್ರಸ್ಟ್‌ನ ಇಬ್ಬರು ಸದಸ್ಯರು ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವಿವಾದ ಮಂಗಳವಾರ ಬೆಳಕಿಗೆ ಬಂದಿದ್ದು, ಆರ್‌ಎಸ್ ದಮಾನಿ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲೇ ಶಾಲಾ ಆಡಳಿತವು ಶಂಕಿತ ಕ್ರಮ ಕೈಗೊಂಡಿದೆ. ಶಾಲಾ ಸಿಬ್ಬಂದಿ, ಪಿರಿಯಡ್ಸ್ ಆಗಿರುವ ವಿದ್ಯಾರ್ಥಿನಿಯರ ಗುರುತಿಸಬೇಕೆಂಬ ಕಾರಣ ನೀಡಿ, 5ರಿಂದ 10ನೇ ತರಗತಿಯ ಎಲ್ಲಾ ಬಾಲಕಿಯರನ್ನು ಶಾಲೆಯ ಕನ್ವೆನ್ಷನ್ ಹಾಲ್‌ಗೆ ಕರೆಸಿದ್ದಾರೆ. ನಂತರ ಶೌಚಾಲಯದ ರಕ್ತದ ಕಲೆಗಳ ಫೋಟೋಗಳನ್ನು ಪ್ರೊಜೆಕ್ಟರ್‌ನಲ್ಲಿ ತೋರಿಸಿ, ಪಿರಿಯಡ್ಸ್ ಆಗಿರುವವರು ಯಾರು ಎಂದು ಪ್ರಶ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಬಳಿಕ, ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಒಬ್ಬೊಬ್ಬರಾಗಿ ಕರೆದೊಯ್ದು, ಖಾಸಗಿ ಅಂಗಾಂಗಗಳ ಪರಿಶೀಲನೆ ನಡೆಸಲಾಗಿದೆ ಎಂದು ಮಹಿಳಾ ಸಹಾಯಕರ ವಿರುದ್ಧ ಆಪಾದನೆ ಕೇಳಿಬಂದಿದೆ. ಈ ಮೂಲಕ ಬಾಲಕಿಯರ ಗೌರವ ಮತ್ತು ಖಾಸಗಿತನವನ್ನು ತುಳಿಯಲಾಗಿದೆ ಎಂಬ ಗಂಭೀರ ಆರೋಪ ಪೋಷಕರಿಂದ ಕೇಳಿಬಂದಿದೆ.
ಪೋಷಕರ ಆಕ್ರೋಶ ಹಿನ್ನೆಲೆ, ಶಹಾಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), ಸೆಕ್ಷನ್ 76 (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ) ಹಾಗೂ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಲಾಗಿದೆ ಎಂಬ ವರದಿ ಬಂದಿಲ್ಲ.
ಶಹಾಪುರ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮುಖೇಶ್ ಧಾಗೆ, “ಪೂರ್ಣ ವಿಚಾರಣೆ ನಂತರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯ ಸಮಾಜದಲ್ಲಿಯೂ ಈ ಘಟನೆಯ ಬಗ್ಗೆ ತೀವ್ರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೋಷಕರು ಹಾಗೂ ಸಮಾಜದ ಮುಖಂಡರು ಶಾಲೆಯ ಮೇಲೆ ಕಾನೂನುನಿಷ್ಠವಾದ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಕ್ಕಳ ಭದ್ರತೆ ಪ್ರಶ್ನೆಗೆದುರಾಗಿದ್ದು, ಶಾಲಾ ನಿರ್ವಹಣೆಯ ಜವಾಬ್ದಾರಿತನದ ಬಗ್ಗೆ ಗಂಭೀರ ಚರ್ಚೆಗೆ ಆಧಾರ ನೀಡಿದೆ.