ಮಧ್ಯಪ್ರದೇಶದ ಮಂಡ್ಸೂರ್ ಜಿಲ್ಲೆಯಲ್ಲಿ 19 ವರ್ಷದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಯಾವುದೇ ಒತ್ತಾಯಗಳಿಲ್ಲದೇ ಮತಾಂತರವಾಗಿ 22 ವರ್ಷದ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ.
ನಜ್ಜಿನ್ ಭಾನು ಎಂಬಾಕೆ ತನ್ನ ಹೆಸರನ್ನು ನಾನ್ಸಿ ಎಂದು ಬದಲಾಯಿಸಿಕೊಂಡು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಗುನಾ ಜಿಲ್ಲೆಯ ಕುಂಭರಾಜ್ ನಿವಾಸಿಗಳಾದ ನಾನ್ಸಿ ಹಾಗೂ ದೀಪಕ್ ಗೋಸ್ವಾಮಿ ಟಿಕ್‌ಟಾಕ್ ಆಪ್ ಮೂಲಕ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದರು. ಇವರ ಸ್ನೇಹ ನಂತರ ಪ್ರೇಮಕ್ಕೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ.
ನಾವು 2019ರಲ್ಲಿ ಟಿಕ್‌ಟಾಕ್‌ ಮೂಲಕ ಪರಸ್ಪರ ಪರಿಚಯವಾದೆವು. ಟಿಕ್‌ಟಾಕ್‌ ಮೂಲಕವೇ ನಾನು ಆತನಿಗೆ ಮೊದಲು ಸಂದೇಶ ಕಳುಹಿಸಿದೆ. ನಂತರ ಆತ ನನಗೆ ಫೋನ್ ಕೊಡಿಸಿದ್ದ. ನಾವು ಫೋನ್ ಮೂಲಕ ಪರಸ್ಪರ ಮಾತನಾಡಲು ಶುರು ಮಾಡಿದೆವು. ಇದು ತಿಳಿಯುತ್ತಿದ್ದಂತೆ ನನ್ನ ಪೋಷಕರು ನನ್ನ ಕೈಯಿಂದ ಮೊಬೈಲ್ ಫೋನ್ ಕಿತ್ತುಕೊಂಡರು. ಅಲ್ಲದೇ ನನ್ನ ಕೈಯಲ್ಲಿ ಫೋನ್ ನೋಡಿದ ನನ್ನ ಪೋಷಕರು ನನ್ನನ್ನು ಥಳಿಸಲು ಶುರು ಮಾಡಿದರು. ದೀಪಕ್ ನಾನು ವಾಸ ಮಾಡುತ್ತಿದ್ದ ಗಲ್ಲಿಯಿಂದ ಮುಂದಿನ ಗಲ್ಲಿಯಲ್ಲಿ ವಾಸ ಮಾಡುತ್ತಿದ್ದ. ನನಗೆ ಭದ್ರತೆ ಬೇಕು ನಾನು ಕುಂಭರಾಜ್‌ನಲ್ಲೇ ಬದುಕಲು ಬಯಸುವೆ ಎಂದು ದೀಪಕ್ ಮದುವೆಯಾದ ನಾನ್ಸಿ ಹೇಳಿದ್ದಾರೆ.
ಇದಕ್ಕೂ ಮೊದಲು ನನ್ನ ಅತ್ತೆ ಮಗನೊಂದಿಗೆ ನನ್ನ ಕುಟುಂಬ ನನ್ನ ಮದುವೆ ಮಾಡಲು ನಿರ್ಧರಿಸಿತ್ತು. ಆದರೆ ಆ ಮದುವೆ ನನಗೆ ಇಷ್ಟವಿರಲಿಲ್ಲ. ನಾನು ಮದುವೆಯಾಗುವುದಾದರೆ ದೀಪಕ್‌ನನ್ನು ಮಾತ್ರ ಎಂದು ಪೋಷಕರಿಗೆ ಹೇಳಿದೆ. ಆದರೆ ಇದಕ್ಕೆ ಪೋಷಕರ ಸಮ್ಮತಿ ಇರಲಿಲ್ಲ. ನಂತರ ನಾವು ಇಲ್ಲಿ ದೇಗುಲಕ್ಕೆ ಬಂದು ಸಂಪ್ರದಾಯದಂತೆ ವಿವಾಹವಾಗಿದ್ದು, ಪ್ರತಿಯೊಬ್ಬರು ನನ್ನ ಗೌರವಿಸಿದರು. ನನಗೆ ತುಂಬಾ ಸಮಾಧಾನವೆನಿಸುತ್ತಿದೆ ಖುಷಿ ಆಗುತ್ತಿದೆ ಎಂದು ನಾನ್ಸಿ ಹೇಳಿಕೊಂಡಿದ್ದಾಳೆ.
ನಂತರ ಮಾತನಾಡಿದ ದೀಪಕ್, ನಮ್ಮ ಪ್ರೇಮ ವಿಚಾರ ತಿಳಿದ ಬಳಿಕ ನಾನ್ಸಿಯ ಪೋಷಕರು ಆಕೆಗೆ ಹಿಗ್ಗಾಮುಗ್ಗಾ ಬಾರಿಸುತ್ತಿದ್ದರು. ಅವಳು ನನಗೆ ಅಲ್ಲಿ ಇರಲಾಗದು, ನಾನು ನಿನ್ನ ಜೊತೆ ಬಂದು ಇರುವೆ ಎಂದು ಹೇಳಿದಳು. ಅಲ್ಲದೇ ಅವರ ಪೋಷಕರು ಒಂದು ವೇಳೆ ಈ ಸಂಬಂಧ ಮುಂದುವರೆದಲ್ಲಿ ಆಕೆಯನ್ನು ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದರು. ಈ ಮಧ್ಯೆ 2020ರ ಮಾರ್ಚ್‌ 20 ರಂದು ನನ್ನ ಮದುವೆ ಬೇರೆಯವರೊಂದಿಗೆ ನಿಶ್ಚಯವಾಯ್ತು. ಈ ವೇಳೆ ನಾನ್ಸಿ ನಿನ್ನ ಹೊರತಾಗಿ ಬೇರೆ ಯಾರನ್ನು ತಾನು ವಿವಾಹವಾಗುವುದಿಲ್ಲ ಎಂದು ಹೇಳಿದಳು. ಹೀಗಾಗಿ ನಾನು ನಿಶ್ಚಯಗೊಂಡ ಮದುವೆಯನ್ನು ಮುರಿದುಕೊಂಡೆ. ನಂತರ ಮೇ 13 ರಂದು ನಾವು ಅಹ್ಮದಾಬಾದ್‌ಗೆ ತೆರಳಿದೆವು. ಅಲ್ಲಿ ನಾವು ಮಂಡಸೂರಿನ ಚೈತನ್ಯ ಸಿಂಗ್ ರಾಜ್‌ಪುತ್ ಅವರನ್ನು ಭೇಟಿಯಾದೆವು. ಅವರು ನನ್ನನ್ನು ಇಲ್ಲಿಗೆ ಬರಲು ಹೇಳಿದರು. ನಂತರ ನಾವು ಇಲ್ಲಿಗೆ ಬಂದಿದ್ದು, ಇಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದೇವೆ ಎಂದು ದೀಪಕ್ ಹೇಳಿದ್ದಾರೆ.
ಈ ಚೈತನ್ಯ ಸಿಂಗ್ ರಾಜ್‌ಪುತ್ ಮೂಲತಃ ಮುಸ್ಲಿಂ ಆಗಿದ್ದು ಜಾಫರ್ ಶೇಖ್ ಆಗಿದ್ದ ಅವರು ಹಿಂದೂ ಧರ್ಮಕ್ಕೆ ಮರಳುವ ಮೂಲಕ ಚೆತನ್ಯ ಸಿಂಗ್ ರಾಜ್‌ಪುತ್ ಎಂದು ಹೆಸರು ಬದಲಿಸಿಕೊಂಡಿದ್ದರು. ಹಿಂದೂ ಹುಡುಗಿಯನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಮಂಡಸೂರ್‌ನಲ್ಲಿ ಕಳೆದ ಆರು ತಿಂಗಳಲ್ಲಿ ಐವರು ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Related News

error: Content is protected !!