ಮಧ್ಯಪ್ರದೇಶದ ಭೋಪಾಲ್ನಲ್ಲಿ ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಘಟನೆ ಇನ್ನೂ ಮಂಕಾಗುವ ಮುನ್ನವೇ, ಹೈದರಾಬಾದ್ನಲ್ಲಿ ನಕಲಿ ದಂತವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ.
ಉತ್ತರ ಪ್ರದೇಶ ಮೂಲದ ರಮೇಶ್ ಎಂಬಾತ, 10ನೇ ತರಗತಿಯನ್ನು ಕೂಡ ಪೂರ್ಣಗೊಳಿಸದೇ, ನಕಲಿ ಬಿ.ಡಿ.ಎಸ್ ಪ್ರಮಾಣಪತ್ರಗಳ ಸಹಾಯದಿಂದ ಕಳೆದ 20 ವರ್ಷಗಳಿಂದ ದಂತವೈದ್ಯನಂತೆ ಕೆಲಸ ಮಾಡುತ್ತಿದ್ದನು. ಮಲ್ಕಾಜ್ಗಿರಿ ಎಸ್ಒಟಿ ತಂಡ ನಡೆಸಿದ ದಾಳಿಯಲ್ಲಿ ಈತನ ಅಕ್ರಮ ಕ್ಲಿನಿಕ್ ಪತ್ತೆಯಾಗಿದ್ದು, ಸಿಕಂದರಾಬಾದ್ನ ನರೆಡ್ಮೆಟ್ನಲ್ಲಿ ಬಂಧಿಸಲಾಗಿದೆ.
ರಮೇಶ್ ತಡರಾತ್ರಿ ರಿಂದ ಬೆಳಗಿನ ಜಾವದವರೆಗೆ ಕ್ಲಿನಿಕ್ ನಡೆಸುತ್ತಿದ್ದನು. ಅವನ ಅನುಮಾನಾಸ್ಪದ ಸಮಯದ ಬಗ್ಗೆ ಸ್ಥಳೀಯರಿಗೆ ಶಂಕೆ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ, ಅವನಿಗೆ ಯಾವುದೇ ಮಾನ್ಯ ವೈದ್ಯಕೀಯ ಅರ್ಹತೆ ಇಲ್ಲ ಎಂಬುದನ್ನು ದೃಢಪಡಿಸಿದ್ದಾರೆ.
ಇಷ್ಟೊಂದು ವರ್ಷಗಳಿಂದ ಯಾವುದೇ ಅನುಮತಿ ಅಥವಾ ಪರಿಶೀಲನೆ ಇಲ್ಲದೆ ಈತ ದಂತವೈದ್ಯನಾಗಿ ಕಾರ್ಯನಿರ್ವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಅವನು ಎಷ್ಟು ಜನರಿಗೆ ಚಿಕಿತ್ಸೆ ನೀಡಿದ್ದಾನೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದೇ ರೀತಿಯಲ್ಲಿ, ಕೆಲ ಸಮಯದ ಹಿಂದೆ ಎಸ್ಎಸ್ಎಲ್ಸಿ ಮಟ್ಟದ ಶಿಕ್ಷಣ ಹೊಂದಿದ್ದ ಇಬ್ಬರು ನಕಲಿ ವೈದ್ಯರು ಸ್ತ್ರೀರೋಗ ತಜ್ಞರಾಗಿ ಕೆಲಸ ಮಾಡಿ, ಹೆರಿಗೆಯ ವೇಳೆ ಮಹಿಳೆಯೊಬ್ಬರ ಸಾವಿಗೆ ಕಾರಣರಾಗಿದ್ದರು. ಈ ಘಟನೆಗಳು ನಕಲಿ ವೈದ್ಯರ ಅಪಾಯದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತಿವೆ.
