ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಧಾರವಾಡದ ಎಎಸ್ಪಿ ನಾರಾಯಣ ಭರಮನಿ, ತೀವ್ರ ಅಸಹನೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಇದೀಗ ಭರಮನಿ ಅವರು ಬರೆದಿರುವ ನಿವೃತ್ತಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅವರ ನೋವಿನ ಮಾತುಗಳು ಜನಮನ ಸ್ಪರ್ಶಿಸುತ್ತಿವೆ.
ಪತ್ರದಲ್ಲಿ ಭರಮನಿ ಅವರು, “ಯಾರದೋ ತಪ್ಪಿಗೆ ನನ್ನನ್ನು ದಂಡಿಸುವ ರೀತಿಯಲ್ಲಿ ನಡೆದುಕೊಂಡ ಈ ಘಟನೆ ನನ್ನ ಹೃದಯದಲ್ಲಿ ಎದೆಮಟ್ಟದ ಗಾಯವನ್ನಾಗಿಸಿದೆ. ಸಾವಿರಾರು ಜನರ ಎದುರು ನನ್ನನ್ನು ನಿಲ್ಲಿಸಿ ತಲೆತಗ್ಗಿಸುವಂತೆ ಮಾಡಿದರೂ, ಸಿಎಂ ಅಥವಾ ಸರ್ಕಾರದ ಮಟ್ಟದಲ್ಲಿ ಕನಿಷ್ಟ ಸಹಾನುಭೂತಿ ಸೂಚಿಸಲಿಲ್ಲ,” ಎಂಬ ಕಹಿ ವರ್ಣನೆ ಮಾಡಿದ್ದಾರೆ.
31 ವರ್ಷಗಳ ಕಾಲ ಪೊಲೀಸಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಭರಮನಿ, ಈ ರೀತಿಯ ಗೌರವಹೀನತೆ ತಮ್ಮ ಆತ್ಮಸ್ಥೈರ್ಯವನ್ನು ಭಂಗಪಡಿಸಿದ್ದಾಗಿ ವ್ಯಕ್ತಪಡಿಸಿದ್ದಾರೆ. “ಸಮವಸ್ತ್ರದಲ್ಲಿದ್ದ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿದ ಸಂಗತಿಯೇ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ಮನೆಯವರು, ಹೆಂಡತಿ, ಮಕ್ಕಳ ಕಣ್ಣು ತುಂಬಿದ ನೋವು ನನಗೆ ಇನ್ನಷ್ಟು ತೀವ್ರವಾದ ನೋವನ್ನು ತಂದಿತು. ಸ್ನೇಹಿತರಿಂದ ಬಂದ ಫೋನ್ಗಳಿಗೆ ಉತ್ತರಿಸುವ ಮನಸ್ಥಿತಿ ಕೂಡ ನನಗೆ ಇರಲಿಲ್ಲ,” ಎಂದಿದ್ದಾರೆ.
ಇನ್ನೂ ಮುಂದೆ ಈ ಘಟನೆಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲದ ಕಾರಣ, ಯಾರದೇ ತಪ್ಪಿಗೆ ತಮ್ಮ ಮೇಲೆ ಬಿದ್ದ ದಂಡನೆಗೆ ಪರಿಗಣನೆ ಇಲ್ಲದ ತೊಂದರೆಗಳಿಂದ ಬೇಸತ್ತು, ಸ್ವಯಂ ನಿವೃತ್ತಿ ಬೇಡಿಕೆಯೊಂದಿಗೆ ಪತ್ರ ಸಲ್ಲಿಸಿದ್ದಾಗಿ ಅವರು ಪತ್ರದ ಅಂತ್ಯದಲ್ಲಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಸಾರ್ವಜನಿಕರು ಭರಮನಿ ಅವರಿಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದು, ಸರ್ಕಾರದ ನಡೆ ಪ್ರಶ್ನೆಗೆ ಒಳಗಾಗಿದೆ.
