ಬೆಂಗಳೂರು ಮಹಾನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿಗೆ ಮೈಲಸಂದ್ರದಲ್ಲಿ ನಡೆದಿದೆ ಎನ್ನಲಾಗುವ ಘಟನೆ ಮತ್ತೊಮ್ಮೆ ದೃಢಪಡಿಸಿದೆ. ನಗರದ ಆನೇಕಲ್ ತಾಲೂಕು ವ್ಯಾಪ್ತಿಯ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಭಾನುವಾರ (ಜೂನ್ 23) ಮಧ್ಯಾಹ್ನ ನಡೆದ ಈ ಕೃತ್ಯದಲ್ಲಿ, ಗಾಂಜಾ ಮತ್ತು ಮದ್ಯದ ನಶೆಯಲ್ಲಿ ತಿರುಗಾಡುತ್ತಿದ್ದ ಐದರಿಂದ ಆರು ಯುವಕರ ಗುಂಪು ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರವಿದೆ.

ಪ್ರಾಥಮಿಕ ಮಾಹಿತಿಯಂತೆ, ಅಂಗಡಿಗೆ ತೆರಳುತ್ತಿದ್ದ ಯುವತಿಯನ್ನು ಮಧ್ಯರಸ್ತೆಯಲ್ಲೇ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಯುವತಿಯ ಮೈ ಕೈ ಮುಟ್ಟಿ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಯುವತಿ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದಾಗ, ಆಕೆಯ ಮೇಲೆ ಹಲ್ಲೆ ನಡೆಸಿದ ಗೂಂಡಾ ಗುಂಪು, ನಂತರ ಆಕೆಯ ಮನೆಯವರೆಗೂ ಹಿಂಬಾಲಿಸಿ ಬಡಿದರೆಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಘಟನೆಯ ನಂತರ ಆತಂಕಗೊಂಡ ಯುವತಿ ಸಮೀಪದ ಮನೆಗೆ ಓಡಿ ಅಲ್ಲಿ ಆಶ್ರಯ ಪಡೆದರೂ, ಆರೋಪಿಗಳ ಗುಂಪು ಆ ಮನೆಯವರೆಗೂ ನುಗ್ಗಿ ಗಲಾಟೆ ನಡೆಸಿದ ವರದಿ ಬಂದಿದೆ.

ಈ ಕುರಿತಂತೆ ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ಮೇಲೆ ಅಧಿಕಾರಿಗಳು ಗಂಭೀರವಾಗಿ ಗಮನಹರಿಸಿ, ಆರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರು ಇದೀಗ ಆರೋಪಿಗಳ ಪತ್ತೆಗಾಗಿ ದಾಳಿ ಆರಂಭಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕೂಡ ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಮಹಿಳೆಯರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Related News

error: Content is protected !!