ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಹತ್ತಿಕಟ್ಟಿಮಠ ಅವರ ಮನೆಗಳ ಮೇಲೆ ಬುಧವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಷಡಕ್ಷರಯ್ಯ ಅವರಿಗೆ ಸೇರಿದ ಗೋಕುಲ ರಸ್ತೆಯ ಡಾ.ಆರ್.ಎಂ. ಲೋಹಿಯಾ ನಗರದಲ್ಲಿರುವ ಮೂರು ಮನೆಗಳು ಹಾಗೂ ಅವರ ಸ್ವಂತ ಊರಾದ ಹಾವೇರಿ ಜಿಲ್ಲೆಯ ಹಿರೇಬೂದಿಹಾಳದಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಐದು ಗಂಟೆಗೂ ಅಧಿಕ ಕಾಲ ದಾಖಲೆಗಳನ್ನು ಪರಿಶೀಲಿಸಿದೆ.

ದಾಳಿಯ ವೇಳೆ ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚರ ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು, ಆಸ್ತಿಗಳ ಮೂಲ ಹಾಗೂ ಆದಾಯದ ವಿವರಗಳನ್ನು ಒದಗಿಸುವಂತೆ ಷಡಕ್ಷರಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಂತಹ ಸಾಮಾನ್ಯ ಹುದ್ದೆಯಲ್ಲಿದ್ದು, ಪೂರ್ವಜರಿಂದಲೂ ಯಾವುದೇ ಆಸ್ತಿ ಬಂದಿಲ್ಲ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದರ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮೂರು ಸ್ವಂತ ಮನೆಗಳ ಖರೀದಿ, ವಿವಿಧೆಡೆ ಭೂಮಿ ಸಂಪಾದನೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಿಂದ ಆದಾಯ ಗಳಿಸಿರುವ ಸಾಧ್ಯತೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿದ್ದರೆ ಅದಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಪಾವತಿಯಾಗಿದೆಯೇ ಮತ್ತು ಸರ್ಕಾರಿ ನೌಕರರಾಗಿರುವ ಅವರು ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಷಡಕ್ಷರಯ್ಯ ಅವರ ಆಸ್ತಿಗಳ ಮೂಲ, ಆದಾಯದ ವಿವರ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರಿದಿದೆ.

Related News

error: Content is protected !!