ತೆಲಂಗಾಣ: ಕೇವಲ ₹10 ಚಿಲ್ಲರೆ ಹಣದ ವಿಚಾರಕ್ಕೆ ಆರಂಭವಾದ ಜಗಳವೊಂದು ಕೊನೆಗೆ ಮಹಿಳಾ ಕಂಡಕ್ಟರ್‌ನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್‌ನಿಂದ ಮಹಿಳಾ ಪ್ರಯಾಣಿಕಳೊಬ್ಬಳು ಕಂಡಕ್ಟರ್‌ನ್ನು ಕೆಳಕ್ಕೆ ನೂಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 24 ವರ್ಷದ ಕಂಡಕ್ಟರ್ ಪ್ರವಾಳಿಕಾ, 10 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಮೃತಪಟ್ಟಿದ್ದಾರೆ.

ಏನಿದು ಘಟನೆ?

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರವಾಳಿಕಾ ಅವರು ಅಕ್ಟೋಬರ್ 25ರಂದು ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಮಿಟ್ಟಗೊಡೆಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮೌನಿಕಾ ಎಂಬ ಮಹಿಳೆ ತನ್ನ ಮಗನೊಂದಿಗೆ ಬಸ್ ಹತ್ತಿದ್ದರು. ಮಗನ ಟಿಕೆಟ್‌ಗಾಗಿ ಮೌನಿಕಾ ₹100 ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಂಡಕ್ಟರ್ ಪ್ರವಾಳಿಕಾ ಅವರು ₹90 ಚಿಲ್ಲರೆ ಹಣವನ್ನು ಟಿಕೆಟ್‌ನ ಹಿಂಭಾಗದಲ್ಲಿ ಬರೆದು ನೀಡಿದ್ದರು ಎನ್ನಲಾಗಿದೆ.

ಆದರೆ, ಚಿಲ್ಲರೆ ಹಣ ನೀಡುವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಮೌನಿಕಾ, ಚಲಿಸುತ್ತಿದ್ದ ಬಸ್‌ನಿಂದಲೇ ಪ್ರವಾಳಿಕಾ ಅವರನ್ನು ಕೆಳಕ್ಕೆ ನೂಕಿದ್ದಾರೆ ಎಂದು ಆರೋಪಿಸಲಾಗಿದೆ.

ಕಂಡಕ್ಟರ್ ಕಾಲಿನ ಮೇಲೆ ಹರಿದ ಬಸ್ ಚಕ್ರ!

ಬಸ್‌ನಿಂದ ರಸ್ತೆಗೆ ಬಿದ್ದ ಪ್ರವಾಳಿಕಾ ಅವರ ಎಡಗಾಲಿನ ಮೇಲೆ ಬಸ್‌ನ ಹಿಂಬದಿಯ ಚಕ್ರ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

10 ದಿನಗಳ ಹೋರಾಟ ಅಂತ್ಯ; ಕಂಡಕ್ಟರ್ ಸಾವು!

ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪ್ರವಾಳಿಕಾ ಅವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮೌನಿಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇವಲ ₹10 ಚಿಲ್ಲರೆ ಹಣಕ್ಕಾಗಿ ಆರಂಭವಾದ ಕ್ಷುಲ್ಲಕ ಜಗಳವೊಂದು ಯುವ ಮಹಿಳಾ ಕಂಡಕ್ಟರ್‌ನ ಬದುಕನ್ನೇ ಕಸಿದುಕೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆಘಾತ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

Related News

error: Content is protected !!