
ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ಮೊದಲ ರ್ಯಾಂಕ್ ಪಡೆದಿದ್ದ ಅಭ್ಯರ್ಥಿ ಶಂಕರ ಬಸವರಾಜ ಬನ್ನೂರ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ನಿರ್ದೇಶನದಂತೆ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ಸವಣೂರು ಉಪವಿಭಾಗಾಧಿಕಾರಿ ಸಮೀರ ಪ್ರಕಾಶ ಖೋಡೆ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಗುಡಿಕೇರಿ ಓಣಿಯ ಎಲೆಪೇಟೆ ನಿವಾಸಿ ಶಂಕರ ಬಸವರಾಜ ಬನ್ನೂರ ಅವರು ಅಕ್ಟೋಬರ್ 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ವಿಎಒ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು.
ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ಎರಡೂ ಅವಧಿಯ ಪರೀಕ್ಷೆಗಳಲ್ಲಿ ಮೊಬೈಲ್ನಂತಹ ಎಲೆಕ್ಟ್ರಾನಿಕ್ ಸಾಧನವನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ದು ನಕಲು ಮಾಡಿದ್ದಾರೆ ಎಂಬುದು ದೂರಿನಲ್ಲಿರುವ ಆರೋಪವಾಗಿದೆ. ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು, ಸರಿಯಾದ ಉತ್ತರಗಳನ್ನು ಪಡೆದು ಒಎಂಆರ್ ಉತ್ತರ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ರೀತಿ ಅಕ್ರಮ ಎಸಗಿ ಒಟ್ಟು 200 ಅಂಕಗಳಿಗೆ 151.25 ಅಂಕಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಭಾನುವಾರ ರಾತ್ರಿ ಶಿಗ್ಗಾವಿ ತಹಶೀಲ್ದಾರ್ ಯಲ್ಲಪ್ಪ ಅವರು ಪೊಲೀಸ್ ಠಾಣೆಗೆ ತೆರಳಿ ಉಪವಿಭಾಗಾಧಿಕಾರಿಗಳ ದೂರನ್ನು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 2023ರ ಪರೀಕ್ಷಾ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.






