₹50 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ವಶಕ್ಕೆ

ಹಳಿಯಾಳ: ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಹಳಿಯಾಳ ಪೊಲೀಸರು, ಕಲಘಟಗಿ ತಾಲೂಕಿನ ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹50 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಂಡಿದ್ದಾರೆ.

ಸಂಕನಕೊಪ್ಪ ಗ್ರಾಮದ ಜಯವಂತ ಮಿರಾಶಿ ಅವರು ಸೆಪ್ಟೆಂಬರ್ 29ರಂದು ಜೋಗನಕೊಪ್ಪ–ಅಮ್ಮನಕೊಪ್ಪ ರಸ್ತೆಯ ಬದಿಯಲ್ಲಿ ತಮ್ಮ ಬೈಕ್ ನಿಲ್ಲಿಸಿ ಹೊಲದ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳ್ಳರು ಬೈಕ್ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಸಂಗ್ರಹಿಸಿ, ಕಲಘಟಿ ತಾಲೂಕಿನ ಜೋಡಳ್ಳಿ ಗ್ರಾಮದ ಪ್ರವೀಣ ದೇವೆಂದ್ರಪ್ಪ ಬಡಿಗೇರ ಹಾಗೂ ಜಿ. ಬಸವಕೊಪ್ಪ ಗ್ರಾಮದ ದೇವರಾಜ ಮಹಾಂತೇಶ ಅಂಬಿಗೇರ ಎಂಬುವವರನ್ನು ಹಳಿಯಾಳ ನಗರದ ಎಪಿಎಂಸಿ ಬಳಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅವರಿಂದ ಕಳವು ಮಾಡಿದ್ದ ಸುಮಾರು ₹50 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದಾಂಡೇಲಿ ಉಪವಿಭಾಗದ ಡಿವೈಎಸ್ಪಿ ಗಿರೀಶ್ ಬಿ. ಹಾಗೂ ಹಳಿಯಾಳ ವೃತ್ತ ನಿರೀಕ್ಷಕ ಭೀಮಣ್ಣ ಸೋರಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಕೀರಣ ಪಾಟೀಲ ಮತ್ತು ಕುಮಾರ್ ಕಾಂಬಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಹಳಿಯಾಳ ಠಾಣೆಯ ಎಎಸ್‌ಐ ಪ್ರಶಾಂತ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ್ ಜಿ.ಎಂ., ವಿನೋದ್ ಜಿ.ಬಿ., ಲಕ್ಷ್ಮಣ ಪೂಜಾರಿ, ಬಸವರಾಜ್ ಚವಡಿ ಮತ್ತು ಮಹಾಂತೇಶ ಮುಧೋಳ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related News

error: Content is protected !!