
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಮೇಲೆ ಆರ್ಥಿಕ ಒತ್ತಡ ಉಂಟಾಗಿರುವುದು ನಿಜ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ಸುಮಾರು ₹52 ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಸರ್ಕಾರದ ಹಣಕಾಸಿನ ಮೇಲೆ ಅದರ ಪರಿಣಾಮವನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಒಂದಷ್ಟು ತೊಂದರೆ ಕೊಟ್ಟಿವೆ. ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗಾಗಿ ಅರ್ಹರಿಗೆ ಮಾತ್ರ ಯೋಜನೆಗಳ ಸೌಲಭ್ಯ ದೊರೆಯುವಂತೆ ಮರುಪರಿಶೀಲನೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಉದ್ದೇಶ ಸೌಲಭ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಲ್ಲ. ಬದಲಾಗಿ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಪ್ರಯೋಜನ ತಲುಪಿಸುವುದು ಹಾಗೂ ಸರ್ಕಾರಕ್ಕೆ ಸಾಧ್ಯವಾದಷ್ಟು ಹಣ ಉಳಿತಾಯ ಮಾಡುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊರ ರಾಜ್ಯದವರಿಗೆ ಉಚಿತ ಸೌಲಭ್ಯ ಏಕೆ?
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದವರಿಗೂ ಉಚಿತ ವಿದ್ಯುತ್ ಸೌಲಭ್ಯ ನೀಡಬೇಕೇ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
“ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವವರಿಗೆ ನಾವು ಉಚಿತ ಯೋಜನೆ ನೀಡಬೇಕೇ? ನಮ್ಮ ರಾಜ್ಯದ ಮತದಾರರಿಗೆ ಮಾತ್ರ ಗ್ಯಾರಂಟಿ ಸೌಲಭ್ಯ ನೀಡುವ ಕುರಿತು ಅರ್ಜಿ ಪರಿಷ್ಕರಣೆ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದಲ್ಲಿಯೂ ಇದೇ ರೀತಿಯ ಬದಲಾವಣೆ ತರಲು ಚಿಂತನೆ ನಡೆದಿದೆ. ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಕರ್ನಾಟಕಕ್ಕೆ ಬರುವ ಹೊರ ರಾಜ್ಯದವರು ರಾಜ್ಯದ ಗಡಿ ಪ್ರವೇಶಿಸಿದ ಬಳಿಕ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕರ್ನಾಟಕದ ಮತದಾರರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್‌ಕಾರ್ಡ್ ನೀಡುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ ಜಾರಿಗೆ ಸುಮಾರು ₹100 ಕೋಟಿ ವೆಚ್ಚವಾದರೂ, ಅರ್ಹರಲ್ಲದವರಿಗೆ ಸೌಲಭ್ಯ ನೀಡುವುದನ್ನು ತಡೆಯುವುದರಿಂದ ಸರ್ಕಾರಕ್ಕೆ ಉಳಿತಾಯವಾಗಲಿದೆ. ಎಷ್ಟು ಹಣ ಉಳಿಯುತ್ತದೆಯೋ ಅಷ್ಟೂ ಸರ್ಕಾರಕ್ಕೆ ಅನುಕೂಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
2028ರಲ್ಲೂ ಅಧಿಕಾರಕ್ಕೆ ಬರುವ ವಿಶ್ವಾಸ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಪಕ್ಷದ ಹೈಕಮಾಂಡ್ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಪಕ್ಷದ ವರಿಷ್ಠರಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಉತ್ತಮ ಆಡಳಿತ ನೀಡುವ ನಿರೀಕ್ಷೆಯನ್ನು ಹೈಕಮಾಂಡ್ ಹೊಂದಿದ್ದು, ಅದನ್ನು ತಾನು ಈಡೇರಿಸುವುದಾಗಿ ಹೇಳಿದ ಅವರು, 2028ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ವಿಶ್ವಾಸವನ್ನು ಪಕ್ಷದ ವರಿಷ್ಠರು ತಮ್ಮ ಮೇಲೆ ಇಟ್ಟಿದ್ದಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
‘ಸಿದ್ದರಾಮಯ್ಯ ನನ್ನ ಜೊತೆ ನಿಲ್ಲುತ್ತಾರೆ’
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಿದೆಯೇ ಎಂಬ ಪ್ರಶ್ನೆಗೂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
“ಸಿದ್ದರಾಮಯ್ಯ ಅವರು ನನ್ನ ಜೊತೆ ನಿಲ್ಲುತ್ತಾರೆ. ಏಕೆಂದರೆ ನಾನು ಅವರ ಜೊತೆ ಬಂಡೆಯಂತೆ ನಿಂತಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ ಬಂಗಾರಪ್ಪ, ಎಸ್.ಎಂ. ಕೃಷ್ಣ ಅವರೊಂದಿಗೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರೊಂದಿಗೂ ಇದ್ದೇನೆ. ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ನಿಂತಿದ್ದೆ. ಆದರೆ ಅವರು ಇದನ್ನು ಒಪ್ಪದಿರಬಹುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.






