ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿರುವ ಅವರು, ಸಿದ್ದರಾಮಯ್ಯ ಅವರನ್ನು ತಮ್ಮ ರಾಜಕೀಯ ನಾಯಕ ಎಂದು ಬಣ್ಣಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿಗಳು ಸತ್ಯವಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. “ಸಿದ್ದರಾಮಯ್ಯ ನಮ್ಮ ಆರ್ಮಿ ಕ್ಯಾಪ್ಟನ್ ಇದ್ದಂತೆ, ನಾನು ವೈಸ್ ಕ್ಯಾಪ್ಟನ್ ಅಷ್ಟೇ. ನಮ್ಮ ನಡುವಿನ ಸ್ನೇಹ ಮತ್ತು ರಾಜಕೀಯ ಬಾಂಧವ್ಯ ಮೊದಲಿನಂತೆಯೇ ಇದೆ. ಪ್ರತಿಬಾರಿಯೂ ಭೇಟಿಯಾಗಬೇಕೆಂದೇನಿಲ್ಲ. ಅಗತ್ಯವಿದ್ದಾಗ ಭೇಟಿಯಾಗುತ್ತೇವೆ. ಅದನ್ನು ಭಿನ್ನಾಭಿಪ್ರಾಯ ಎಂದು ಅರ್ಥೈಸುವುದು ಸರಿಯಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಇಡಿ ದಾಳಿ ಬಳಿಕ ತಮ್ಮನ್ನು ಭೇಟಿಯಾಗಿದ್ದ ವಿಚಾರವನ್ನೂ ಸತೀಶ್ ಜಾರಕಿಹೊಳಿ ಪ್ರಸ್ತಾಪಿಸಿದ್ದಾರೆ. “ಒಂದು ಕುಟುಂಬದಿಂದ ಒಬ್ಬರು ಬಂದು ಸಾಂತ್ವನ ಹೇಳಿದರೆ ಸಾಕು. ಮನೆಯವರೆಲ್ಲರೂ ಬರಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

2028ರಲ್ಲಿ ಡಿಕೆಶಿ ಸಿಎಂ ಆಗಲಿ

ಇದೇ ವೇಳೆ 2028ರ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲೂ ಸತೀಶ್ ಜಾರಕಿಹೊಳಿ ತಮ್ಮ ನಿಲುವು ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗೂ ಅವರೇ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನನಗೆ ಇನ್ನೂ ವಯಸ್ಸಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಯಲು ನಾನು ಸಿದ್ಧನಿದ್ದೇನೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ನೋಡೋಣ. ಸದ್ಯಕ್ಕೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ನನ್ನ ಸಹಮತವಿದೆ” ಎಂದು ಅವರು ಹೇಳಿದ್ದಾರೆ.

ಸರ್ಕಾರ ದಿವಾಳಿಯಾಗಿಲ್ಲ, ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ

ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಆರ್ಥಿಕ ಇಲಾಖೆ ಹೊರಡಿಸಿರುವ ಪತ್ರದ ಬಗ್ಗೆಯೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಎಂದು ಪತ್ರವನ್ನು ಅರ್ಥೈಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳಿಗೆ ಹಣ ಮೀಸಲಿದ್ದು, ಹೊಸ ಯೋಜನೆಗಳನ್ನು ಘೋಷಿಸುವ ಮುನ್ನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ ಅಷ್ಟೇ ಎಂದು ಅವರು ವಿವರಿಸಿದ್ದಾರೆ. ಕೆಲವು ಇಲಾಖೆಗಳಲ್ಲಿನ ಉಳಿಕೆ ಹಣವನ್ನು ಹೊಸ ಯೋಜನೆಗಳಿಗೆ ಬಳಸಿಕೊಳ್ಳುವ ಚಿಂತನೆಯೂ ಇದೆ. ಆಡಳಿತದಲ್ಲಿ ಆರ್ಥಿಕ ಶಿಸ್ತು ಪಾಲಿಸುವುದು ಸಹಜ ಎಂದು ಅವರು ಹೇಳಿದ್ದಾರೆ.

ಇಡಿ ದಾಳಿಗೆ ಸಿದ್ಧ, ರಾಜಕೀಯ ಒತ್ತಡಕ್ಕೆ ಬಗ್ಗಲ್ಲ

ತಮ್ಮ ವಿರುದ್ಧ ನಡೆಯುತ್ತಿರುವ ಇಡಿ ತನಿಖೆ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ. ಇಡಿಯಿಂದ ನೋಟಿಸ್ ಬರುವ ಸಾಧ್ಯತೆ ಇದೆ ಎಂಬುದು ತಿಳಿದಿದ್ದು, ಅದಕ್ಕೆ ಸೂಕ್ತ ಉತ್ತರ ನೀಡಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿದೇಶಿ ಹೂಡಿಕೆ ಹಾಗೂ ಕಮಿಷನ್ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ. “ಕಳೆದ 14 ವರ್ಷಗಳಿಂದ ಬಿಜೆಪಿ ನಾಯಕರ ಮೇಲೆ ಇಂತಹ ದಾಳಿಗಳು ನಡೆಯುತ್ತಿಲ್ಲವೇಕೆ?” ಎಂದು ಪ್ರಶ್ನಿಸಿರುವ ಅವರು, ತನಿಖೆ ಅಥವಾ ಒತ್ತಡದ ತಂತ್ರಗಳಿಂದ ತಾವು ಮಾನಸಿಕವಾಗಿ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಕಾನೂನು ಮತ್ತು ರಾಜಕೀಯ ಹೋರಾಟವನ್ನು ಮುಂದುವರಿಸುವುದಾಗಿ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

Related News

error: Content is protected !!