
ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಖ್ಯಶಿಕ್ಷಕನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವಾಡಾ ಸದರ್ ಬ್ಲಾಕ್ನ ಆನಂದಪುರದಲ್ಲಿರುವ ಅಪ್ಗ್ರೇಡೆಡ್ ಮಿಡಲ್ ಶಾಲೆಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಆರೋಪಿ ಮಹೇಶ್ ಪ್ರಸಾದ್ ಯಾದವ್ (52) ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಮುಟ್ಟುವುದು, ಕೆನ್ನೆ ಮುಟ್ಟುವುದು ಮತ್ತು ಶೌಚಾಲಯಕ್ಕೆ ತೆರಳುವಾಗ ಹಿಂಬಾಲಿಸಿ ಇಣುಕಿ ನೋಡುವುದು ಸೇರಿದಂತೆ ವಿಕೃತ ವರ್ತನೆ ತೋರುತ್ತಿದ್ದ ಎಂದು ಬಾಲಕಿಯರು ಆರೋಪಿಸಿದ್ದಾರೆ.
ಈ ವಿಷಯವನ್ನು ಬಾಲಕಿಯರು ತಮ್ಮ ಪೋಷಕರಿಗೆ ತಿಳಿಸುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ. ಶಾಲಾ ಆವರಣದ ಮುಂದೆ ಜಮಾಯಿಸಿದ ಗ್ರಾಮಸ್ಥರು ಹಾಗೂ ಪೋಷಕರು ಆರೋಪಿ ಮುಖ್ಯಶಿಕ್ಷಕನ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ನಗರ್ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಸೆಪ್ಟೆಂಬರ್ 18ರಂದು ಮಹಿಳಾ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ಶಾಲೆಗೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ವಿದ್ಯಾರ್ಥಿನಿಯರ ದೂರಿನ ಅನ್ವಯ ಮಹೇಶ್ ಪ್ರಸಾದ್ ಯಾದವ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಅಧಿಕೃತವಾಗಿ ಬಂಧಿಸಲಾಯಿತು.
ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ನಗರ ಠಾಣೆಯ ಎಸ್ಎಚ್ಒ ಉಮಾಶಂಕರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಸಂತ್ರಸ್ತ ಬಾಲಕಿಯರನ್ನು ಮಹಿಳಾ ಪೊಲೀಸರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ನ್ಯಾಯಾಲಯದ ಮುಂದೆ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ.






