ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಹಾಗೂ ಧನ್ಯತಾ ದಂಪತಿ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಮ್ಮ ಪುತ್ರನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದಂಪತಿ, ಈ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮದುವೆಯ ಬಳಿಕ ಧನಂಜಯ ಹಾಗೂ ಧನ್ಯತಾ ದಂಪತಿ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದರು. ಹೀಗಾಗಿ ಅಭಿಮಾನಿಗಳು, ‘ನಿಮ್ಮನ್ನು ಪ್ರೀತಿಸುವ ಜೀವಗಳು, ಮಗನನ್ನು ನಮಗೆ ಯಾವಾಗ ತೋರಿಸುತ್ತೀರಿ? ಮಗನ ಹೆಸರೇನು?’ ಎಂದು ಕುತೂಹಲದಿಂದ ಪ್ರಶ್ನಿಸುತ್ತಿದ್ದರು.

ಅಭಿಮಾನಿಗಳ ಈ ಕುತೂಹಲಕ್ಕೆ ಇದೀಗ ಹಬ್ಬದ ದಿನವೇ ಉತ್ತರ ನೀಡಿರುವ ದಂಪತಿ, ತಮ್ಮ ಪುತ್ರನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಗನಿಗೆ ‘ಎರೆಯ’ ಎಂಬ ವಿಶೇಷ ಹೆಸರು

ತಮ್ಮ ಮಗನಿಗೆ ‘ಎರೆಯ’ ಎಂಬ ಪುರಾತನ ಕನ್ನಡ ಹೆಸರನ್ನು ಇಟ್ಟಿರುವುದಾಗಿ ಧನಂಜಯ ತಿಳಿಸಿದ್ದಾರೆ. ‘ಎರೆಯ’ ಎಂಬುದು ಕನ್ನಡದ ಪುರಾತನ ಪರಂಪರೆಯಲ್ಲಿ ಗೌರವಪೂರ್ಣ ಪದವಾಗಿದ್ದು, ಒಡೆಯ, ಸ್ವಾಮಿ, ಅಧಿಪತಿ ಎಂಬ ಅರ್ಥಗಳನ್ನು ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಹಿಂದಿನ ಕಾಲದಲ್ಲಿ ರಾಜರು ಹಾಗೂ ಅರಸರನ್ನು ಗೌರವದಿಂದ ಸಂಬೋಧಿಸಲು ಈ ಪದವನ್ನು ಬಳಸಲಾಗುತ್ತಿತ್ತು. ಅಲ್ಲದೆ, ಚಾಲುಕ್ಯರ ಪ್ರಸಿದ್ಧ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ ‘ಎರೆಯ’ ಎಂಬ ಹೆಸರು ಇತಿಹಾಸದ ಪುಟಗಳಲ್ಲಿ ಕಾಣಿಸುತ್ತದೆ ಎಂದು ಧನಂಜಯ ಮಾಹಿತಿ ನೀಡಿದ್ದಾರೆ.

‘ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ, ನಮ್ಮ ಹೃದಯದ ರಾಜ, ನಮ್ಮ ಎರೆಯ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ಇರಲಿ’ ಎಂದು ಧನಂಜಯ ಭಾವುಕವಾಗಿ ಬರೆದುಕೊಂಡಿದ್ದಾರೆ.

ಮಗನ ಫೋಟೋಗಳೊಂದಿಗೆ ಹೆಸರು ಹಾಗೂ ಅದರ ಹಿಂದಿರುವ ವಿಶೇಷ ಅರ್ಥವನ್ನು ಹಂಚಿಕೊಂಡಿರುವ ಧನಂಜಯ–ಧನ್ಯತಾ ದಂಪತಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

Related News

error: Content is protected !!