ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2018ರ ಅಕ್ಟೋಬರ್ 16ರಂದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್ ಅವರನ್ನು ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಮೃತರ ದೂರದ ಸಂಬಂಧಿ ಮಂಜುನಾಥ ಈಶ್ವರ ಹೆಗಡೆ, ಆತನ ತಂಗಿಯ ಮಗ ಹರೀಶ್ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ನಾಯ್ಕ ಆರೋಪಿಗಳಾಗಿದ್ದರು.

ಪೂಜೆಯ ನೆಪದಲ್ಲಿ ಕರೆಸಿ ಹತ್ಯೆ

ಮೂರೂರಿನಲ್ಲಿ ಜಮೀನು ಪೂಜೆ ನಡೆಯಲಿದೆ ಎಂದು ವಿಶ್ವೇಶ್ವರ ಭಟ್ ಅವರನ್ನು ನಂಬಿಸಿದ ಆರೋಪಿಗಳು, ಪೂಜೆಗೆ ತೆರಳುವಂತೆ ಅವರನ್ನು ಕರೆದುಕೊಂಡು ಹೋಗಿದ್ದರು. ಬಳಿಕ ಕೂಜಳ್ಳಿಯಲ್ಲಿರುವ ಮಂಜುನಾಥ ಹೆಗಡೆ ಅವರ ತೋಟಕ್ಕೆ ಕರೆದೊಯ್ದು ಮಾರಕಾಸ್ತ್ರದಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಹತ್ಯೆಯ ಬಳಿಕ ಶವವನ್ನು ತೋಟದಲ್ಲಿಯೇ ಹೂತುಹಾಕಿದ್ದ ಆರೋಪಿಗಳು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ವಿಶ್ವೇಶ್ವರ ಭಟ್ ಅವರ ಬೈಕ್ ಅನ್ನು ತೋಟದ ಬಾವಿಗೆ ಎಸೆದಿದ್ದರು ಎನ್ನಲಾಗಿದೆ.

ನಾಪತ್ತೆ ಪ್ರಕರಣದಿಂದ ಬಯಲಿಗೆ ಬಂದ ಕೊಲೆ

ವಿಶ್ವೇಶ್ವರ ಭಟ್ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸರಸ್ವತಿ ಭಟ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್‌ಐ ಸಂಪತ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿತ್ತು.

ತನಿಖೆಯ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಮಂಡಿಸಲಾದ ಸಾಕ್ಷ್ಯಾಧಾರಗಳು ಹಾಗೂ ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಮೂವರು ಆರೋಪಿಗಳೂ ತಪ್ಪಿತಸ್ಥರೆಂದು ತೀರ್ಮಾನಿಸಿದೆ.

ಅದರಂತೆ ಮಂಜುನಾಥ ಈಶ್ವರ ಹೆಗಡೆ, ಹರೀಶ್ ಹೆಗಡೆ ಹಾಗೂ ಧನಂಜಯ ನಾಯ್ಕ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.

Related News

error: Content is protected !!