
ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸತತ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ತಾಲೂಕಿನ ಕಡಶಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಮ್ಮ ಎಂಬುವವರ ಜಮೀನಿನಲ್ಲಿರುವ ಸುಮಾರು 30×30 ಅಡಿ ವಿಸ್ತೀರ್ಣ ಹಾಗೂ 30 ಅಡಿ ಆಳದ ತೆರೆದ ಬಾವಿಗೆ ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿತ್ತು. ಬಾವಿಯಲ್ಲಿ ನೀರು ಇಲ್ಲದಿದ್ದರೂ, ಆಳ ಹೆಚ್ಚಾಗಿದ್ದರಿಂದ ಮೇಲಕ್ಕೆ ಬರಲಾಗದೆ ನಾಯಿ ಒದ್ದಾಡುತ್ತಾ ಅಳುತ್ತಿತ್ತು.
ನಾಯಿಯ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಜಲವಾಹನದೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಹಗ್ಗ ಹಾಗೂ ಬಲೆಗಳ ನೆರವಿನಿಂದ ಬಾವಿಯೊಳಗೆ ಇಳಿದ ಸಿಬ್ಬಂದಿ, ಸುಮಾರು ಒಂದು ಗಂಟೆ 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ, ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.
ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಸ್ಪಂದನೆ ಹಾಗೂ ಸಮಯಪ್ರಜ್ಞೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಸಿಬ್ಬಂದಿಗೆ ಹಸ್ತಲಾಘವ ನೀಡಿ ಧನ್ಯವಾದ ಅರ್ಪಿಸಿದರು.
ಪ್ರಮುಖ ಅಗ್ನಿಶಾಮಕ ರವೀಂದ್ರ ಸಂಗಮ ಅವರ ನೇತೃತ್ವದಲ್ಲಿ ಮಡಿವಾಳರ ಬಸವರಾಜ, ರಾಜು ಮುರಕುಟ್ಟಿ, ದತ್ತಾತ್ರೇಯ ಹಾಗೂ ಬೋರಗಾವಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಯಿಯನ್ನು ಯಶಸ್ವಿಯಾಗಿ ರಕ್ಷಿಸಿದರು.






