
ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್ನಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿದೆ.
ನೆಲಮಂಗಲ ಸಮೀಪದ ಸೋಲೂರು ಬಳಿ ಬೆಳಗಿನ ಜಾವ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಧ್ಯರಾತ್ರಿ ಪ್ರಯಾಣದ ವೇಳೆ ಯುವಕನೊಬ್ಬ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಯುವತಿಯನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಿಂದ ಆಕ್ರೋಶಗೊಂಡ ಯುವತಿ ಬಸ್ನಲ್ಲೇ ಕಣ್ಣೀರಿಡುತ್ತಾ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವತಿಯ ನೆರವಿಗೆ ಸಹ ಪ್ರಯಾಣಿಕರು ಧಾವಿಸಿದ್ದು, ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಯುವತಿ ಚಪ್ಪಲಿಯಿಂದ ಯುವಕನಿಗೆ ಹೊಡೆದಿದ್ದು, ಇತರ ಪ್ರಯಾಣಿಕರೂ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಯುವಕ ತನ್ನ ವರ್ತನೆಗೆ ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.
ನಿದ್ದೆಯಲ್ಲಿದ್ದಾಗ ಅಜಾಗರೂಕತೆಯಿಂದ ಅನುಚಿತವಾಗಿ ಮುಟ್ಟಿದ್ದಾಗಿ ಯುವಕ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸಿದ್ದು, ಬಸ್ನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದರೆ ಮಾತ್ರ ಪ್ರಕರಣದ ಸಂಪೂರ್ಣ ಸತ್ಯಾಂಶ ಸ್ಪಷ್ಟವಾಗಲಿದೆ.






