
ಪಾವಗಡ: ತಾಲೂಕಿನ ರಂಗಸಮುದ್ರದಲ್ಲಿರುವ ಕಸ್ತೂರಬಾ ಗಾಂಧಿ ವಸತಿ ನಿಲಯದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ ಎಂಬ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬಾಲಕಿಯ ಸಾವಿನ ಕುರಿತು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.
ಶನಿವಾರ ಬೆಳಗ್ಗೆ ವಸತಿ ನಿಲಯದ ವಾರ್ಡನ್ ಬಾಲಕಿಯ ಪೋಷಕರಿಗೆ ಕರೆ ಮಾಡಿ, ಪ್ರಿಯಾಂಕಳಿಗೆ ಆರೋಗ್ಯದಲ್ಲಿ ತೊಂದರೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪೋಷಕರು ಸ್ಥಳಕ್ಕೆ ಆಗಮಿಸುವ ವೇಳೆಗೆ ಬಾಲಕಿ ಮೃತಪಟ್ಟಿದ್ದಳು ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆ ಪೋಷಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಸತಿ ನಿಲಯದಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿರಬಹುದು ಎಂದು ಪೋಷಕರು ಆರೋಪಿಸಿದ್ದಾರೆ. ಹಾಸ್ಟೆಲ್ನಲ್ಲಿ ಸಮರ್ಪಕ ಮಂಚಗಳಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಚ್ಛತೆಯ ಕೊರತೆಯೂ ಇದೆ ಎಂದು ದೂರಿದ್ದಾರೆ.
ಇನ್ನು ಶಾಲೆ ಮತ್ತು ವಸತಿ ನಿಲಯದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಬಾಲಕಿ ಬಿದ್ದು ಗಾಯಗೊಂಡಿದ್ದಳು ಎಂದು ವಾರ್ಡನ್ ಹೇಳುತ್ತಿದ್ದರೂ, ಆಕೆಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಂಜುನಾಥ್, ತಹಶೀಲ್ದಾರ್ ವೈ. ರವಿ ಹಾಗೂ ಇಒ ಮಧುಸೂದನ್ ಅವರು ಲಿಂಗದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿಯಲು ಮೃತದೇಹವನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆ ಹಾಗೂ ತನಿಖೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಸಾವಿನ ಹಿಂದಿರುವ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ವಸತಿ ನಿಲಯದ ವ್ಯವಸ್ಥೆ, ಸಿಸಿಟಿವಿ ಸ್ಥಿತಿ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಹಾಗೂ ಬಾಲಕಿಗೆ ದೊರೆತ ವೈದ್ಯಕೀಯ ನೆರವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.






