
163 ಕಿ.ಮೀ. ಉದ್ದದ ಯೋಜನೆ; ಉತ್ತರ ಕನ್ನಡದ 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ
ಉತ್ತರ ಕನ್ನಡ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ ಹುಬ್ಬಳ್ಳಿ–ಅಂಕೋಲಾ ವಿಶೇಷ ರೈಲ್ವೆ ಯೋಜನೆ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಬಹುದಿನಗಳ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ.
ಹುಬ್ಬಳ್ಳಿ–ಅಂಕೋಲಾ ನಡುವೆ ಒಟ್ಟು 163 ಕಿ.ಮೀ. ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಿಸುವ ಉದ್ದೇಶ ಹೊಂದಿರುವ ಈ ಯೋಜನೆಯಲ್ಲಿ ವಿದ್ಯುದ್ದೀಕರಣ ಸಹಿತ ಡಬಲ್ ಲೈನ್ ನಿರ್ಮಾಣಕ್ಕೆ ಪ್ರಸ್ತಾವಿಸಲಾಗಿದೆ. ರೈಲ್ವೆ ಸಚಿವಾಲಯದ ಅಂದಾಜಿನ ಪ್ರಕಾರ ಯೋಜನೆಯ ಒಟ್ಟು ವೆಚ್ಚ ಇದೀಗ ₹16,435 ಕೋಟಿಗೆ ಏರಿಕೆಯಾಗಿದೆ.
ನಾಲ್ಕು ತಾಲೂಕುಗಳ 69 ಗ್ರಾಮಗಳು
ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಡಿ ಹುಬ್ಬಳ್ಳಿ ತಾಲೂಕಿನಲ್ಲಿ 13, ಕಲಘಟಗಿ ತಾಲೂಕಿನಲ್ಲಿ 16, ಯಲ್ಲಾಪುರ ತಾಲೂಕಿನಲ್ಲಿ 24 ಹಾಗೂ ಅಂಕೋಲಾ ತಾಲೂಕಿನಲ್ಲಿ 16 ಗ್ರಾಮಗಳನ್ನು ಒಳಪಡಿಸಲಾಗಿದೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ಒಟ್ಟು 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ ಬಂದಿವೆ.
ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಲ್ವೇರಿ, ರಾಮನಕೊಪ್ಪ, ಕನ್ನಡಗಲ್, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡಗದ್ದೆ, ಕಳಚೆ ಹಾಗೂ ಮಾವಿನಮನೆ ಸೇರಿದಂತೆ 24 ಗ್ರಾಮಗಳು ಯೋಜನೆಯ ವ್ಯಾಪ್ತಿಯಲ್ಲಿವೆ.
ಅಂಕೋಲಾ ತಾಲೂಕಿನ ಸುಂಕನಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗರಮಕಿಗದ್ದೆ, ಅದ್ದೂರ, ನಾವಗದ್ದೆ, ಬೋಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ ಗ್ರಾಮಗಳು ಭೂಸ್ವಾಧೀನಕ್ಕೆ ಒಳಪಡಲಿವೆ.
₹483 ಕೋಟಿಯಿಂದ ₹16,435 ಕೋಟಿಗೆ ಏರಿದ ವೆಚ್ಚ
ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ 1997–98ರಲ್ಲೇ ಮಂಜೂರಾತಿ ದೊರೆತಿತ್ತು. ಆ ಸಂದರ್ಭದಲ್ಲಿ ಯೋಜನೆಯ ನಿರ್ಮಾಣ ವೆಚ್ಚವನ್ನು ಸುಮಾರು ₹483 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಯೋಜನೆ ಹಲವು ವರ್ಷಗಳ ಕಾಲ ಮುಂದೂಡಲ್ಪಟ್ಟಿದ್ದು, ಇದೀಗ ಯೋಜನೆಯ ಅಂದಾಜು ವೆಚ್ಚ ಬರೋಬ್ಬರಿ ₹16,435 ಕೋಟಿಗೆ ಏರಿಕೆಯಾಗಿದೆ.
ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ. ಹುಬ್ಬಳ್ಳಿ ಭಾಗದಿಂದ ಅಂಕೋಲಾ ಹಾಗೂ ಕರಾವಳಿ ಪ್ರದೇಶಗಳಿಗೆ ನೇರ ರೈಲು ಸಂಪರ್ಕಕ್ಕೆ ಇದು ಪ್ರಮುಖ ಉತ್ತೇಜನ ನೀಡಲಿದೆ.
2,532 ಎಕರೆ ಭೂಮಿ ಅಗತ್ಯ
ಯೋಜನೆ ಅನುಷ್ಠಾನಕ್ಕೆ ಒಟ್ಟು 2,532 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 1,466 ಎಕರೆ ಅರಣ್ಯ ಭೂಮಿ, 596 ಎಕರೆ ಖಾಸಗಿ ಭೂಮಿ ಹಾಗೂ 470 ಎಕರೆ ಸರ್ಕಾರಿ ಜಾಗ ಸೇರಿದೆ.
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ಮೂಲಕ ರೈಲು ಮಾರ್ಗ ಹಾದುಹೋಗಲಿರುವ ಹಿನ್ನೆಲೆಯಲ್ಲಿ ಯೋಜನೆಗೆ ಪರಿಸರ ಹಾಗೂ ವನ್ಯಜೀವಿ ಸಂಬಂಧಿತ ಅನುಮತಿಗಳು ಅತ್ಯಂತ ಮಹತ್ವ ಪಡೆದಿವೆ. ಹೆಚ್ಚಿನ ಪ್ರಮಾಣದ ಅರಣ್ಯ ಭೂಮಿ ಯೋಜನೆಯ ವ್ಯಾಪ್ತಿಗೆ ಬರುತ್ತಿರುವುದರಿಂದ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಮೇಲಿನ ಪರಿಣಾಮದ ಕುರಿತು ಚರ್ಚೆಗಳು ಮತ್ತೆ ತೀವ್ರಗೊಂಡಿವೆ.
ಅರಣ್ಯ–ವನ್ಯಜೀವಿ ಅನುಮತಿಗೆ ಅರ್ಜಿ
ಯೋಜನೆಗೆ ಅಗತ್ಯವಿರುವ ವನ್ಯಜೀವಿ ಅನುಮೋದನೆ ಹಾಗೂ ಅರಣ್ಯ ಅನುಮತಿ ಪಡೆಯಲು ರೈಲ್ವೆ ಇಲಾಖೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ವನ್ಯಜೀವಿ ಅನುಮೋದನೆ ಹಾಗೂ ಕೇಂದ್ರ ಅರಣ್ಯ ಸಚಿವಾಲಯದಿಂದ ಅರಣ್ಯ ಅನುಮೋದನೆ ಪಡೆಯಲು ರೈಲ್ವೆ ಇಲಾಖೆ ಜುಲೈ 10ರಂದು ಅರ್ಜಿ ಸಲ್ಲಿಸಿತ್ತು.
ಇದೀಗ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಬಂದಿರುವುದು ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಆದರೆ ಭೂಸ್ವಾಧೀನದ ಜತೆಗೆ ಅರಣ್ಯ ಮತ್ತು ವನ್ಯಜೀವಿ ಅನುಮತಿಗಳು, ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮ ಹಾಗೂ ಮರಗಳ ತೆರವು ಸೇರಿದಂತೆ ಹಲವು ಸವಾಲುಗಳನ್ನು ಇಲಾಖೆ ಎದುರಿಸಬೇಕಿದೆ.
ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿರುವುದು ಯೋಜನೆಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ. ಇದೇ ವೇಳೆ ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಯೋಜನೆಯನ್ನು ಹೇಗೆ ಸಮತೋಲನಗೊಳಿಸಲಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಪ್ರಮುಖ ಪ್ರಶ್ನೆಯಾಗಲಿದೆ.






