
ಬೆಂಗಳೂರು: ಮನೆದಲ್ಲೇ ಕುಳಿತು ಬೂದುಬತ್ತಿ, ಮೆಣದಬತ್ತಿ ಹಾಗೂ ಪೇಪರ್ ಪ್ಲೇಟ್ ಪ್ಯಾಕಿಂಗ್ ಕೆಲಸ ನೀಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ನಂಬಿಸಿ ಜನರಿಂದ ಲಕ್ಷಾಂತರ ರೂಪಾಯಿ ಡೆಪಾಸಿಟ್ ಪಡೆದು ವಂಚನೆ ನಡೆಸುತ್ತಿದ್ದ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಿರಣ್ (28) ಮತ್ತು ಆರತಿ (23) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಚಿಕ್ಕಜಾಲ ನಿವಾಸಿಗಳಾಗಿದ್ದು, ಕಾಮಿಕಾದೇವಿ ಎಂಟರ್ಪ್ರೈಸಸ್ ಹೆಸರಿನಲ್ಲಿ ನಕಲಿ ಕಂಪನಿ ನಡೆಸಿ ವಂಚನೆ ನಡೆಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಮನೆ ಆಧಾರಿತ ಉದ್ಯೋಗದ ಆಮಿಷವೊಡ್ಡಿ, ಬೂದುಬತ್ತಿ, ಮೆಣದಬತ್ತಿ ಹಾಗೂ ಪೇಪರ್ ಪ್ಲೇಟ್ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ, ಗ್ರಾಹಕರಿಂದ ಭದ್ರತಾ ಠೇವಣಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸುತ್ತಿದ್ದರು. ಹಣ ಪಡೆದ ಬಳಿಕ ಕೆಲಸ ನೀಡದೇ, ಸಂಪರ್ಕಕ್ಕೂ ಸಿಗದೆ ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿಕ್ಕಜಾಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ಕೋಲಾರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ತನಿಖೆ ನಡೆಸಿದ ದೇವನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಮೂಲಕ ಮನೆ ಆಧಾರಿತ ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿರುವ ಆನ್ಲೈನ್ ಹಾಗೂ ಆಫ್ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.






