
ದೇವನಹಳ್ಳಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮಗಳ ಮದುವೆಗೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಮಾಸಿಕ ಸಂಬಳವನ್ನು ತನ್ನ ಕೈಗೆ ನೀಡಬೇಕೆಂದು ಒತ್ತಾಯಿಸಿದ ತಂದೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಗಳ ಮೇಲೆಯೇ ಚೂರಿಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಆರೋಪಿ ನಾಗೇಂದ್ರ ತನ್ನ ಮಗಳು ಲಕ್ಷ್ಮೀದುರ್ಗಾಳ ಮದುವೆಗೆ ವರನನ್ನು ಹುಡುಕಿದ್ದನು. ಆದರೆ, “ಮಗಳನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ್ದೇನೆ. ಹೀಗಾಗಿ ಮದುವೆಯಾಗುವವರು 40 ಲಕ್ಷ ರೂಪಾಯಿ ವದುದಕ್ಷಿಣೆ ನೀಡಬೇಕು. ಜೊತೆಗೆ ಮಗಳು ಉದ್ಯೋಗದಿಂದ ಪಡೆಯುವ ಮಾಸಿಕ ಸಂಬಳವೂ ನನಗೇ ಬರಬೇಕು” ಎಂದು ಷರತ್ತು ವಿಧಿಸಿದ್ದಾನೆ ಎನ್ನಲಾಗಿದೆ.
ಈ ಬೇಡಿಕೆಗೆ ಲಕ್ಷ್ಮೀದುರ್ಗಾ ಹಾಗೂ ಆಕೆಯ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ನಾಗೇಂದ್ರ ಚೂರಿಯಿಂದ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಗಾಯಗೊಂಡ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.






