ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ಹಾಗೂ ಕೇಸ್ ವರ್ಕರ್ ಸರ್ವಮಂಗಳ ಅವರು ವಾಹನ ಸಹಾಯಧನ (ಕಾರು ಸಾಲ) ಮಂಜೂರು ಮಾಡಿಕೊಡುವುದಾಗಿ ಹೇಳಿ ಫಲಾನುಭವಿಯಿಂದ ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ದೂರುದಾರ ಮಹಮ್ಮದ್ ಜುಬೇರ್ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು.

ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದ ತಂಡ, ಆರೋಪಿಗಳು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಕಾರ್ಯಾಚರಣೆ ವೇಳೆ ಲಂಚದ ಹಣವನ್ನು ವಶಪಡಿಸಿಕೊಂಡು ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮವನ್ನು ಎತ್ತಿ ತೋರಿಸಿದೆ.

Related News

error: Content is protected !!