ಬೆಂಗಳೂರು: ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, MLC ಸ್ಥಾನ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹1.50 ಕೋಟಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣ ವಂಚನೆಯ ಜೊತೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಪ್ರಕಾರ, ಯರ್ರಿಸ್ವಾಮಿ ಎಂಬಾತ ತಾನು ಕಾಂಗ್ರೆಸ್ ನಾಯಕರ ಆಪ್ತ ಹಾಗೂ ಮಾಧ್ಯಮ ಸಲಹೆಗಾರ ಎಂದು ಹೇಳಿಕೊಂಡು, ಹಲವು ರಾಜಕೀಯ ಮುಖಂಡರೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ. ಬಳಿಕ MLC ಸ್ಥಾನ ದೊರಕಿಸಿಕೊಡುವುದಾಗಿ ಹೇಳಿ ₹5 ಕೋಟಿ ಬೇಡಿಕೆ ಇಟ್ಟಿದ್ದಾನೆ.
ಆತನ ಮಾತು ನಂಬಿದ ಮಹಿಳೆ 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ಹಂತ ಹಂತವಾಗಿ ₹1.50 ಕೋಟಿ ಹಣವನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಯ ಸೂಚನೆಯಂತೆ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪದ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಹಣ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆ, ಎಐಸಿಸಿ (AICC) ಹೈಕಮಾಂಡ್ ನಾಯಕರನ್ನು ಭೇಟಿಮಾಡಿಸುವ ನೆಪದಲ್ಲಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದು, ಅಲ್ಲಿ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೂ ಯರ್ರಿಸ್ವಾಮಿ ವಿರುದ್ಧ ಕೇಳಿಬಂದಿದೆ.
ತಾನು ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಯರ್ರಿಸ್ವಾಮಿ, ಬಸವರಾಜು ಹಾಗೂ ಸಿದ್ದರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜಕೀಯ ಪ್ರಭಾವದ ಹೆಸರಿನಲ್ಲಿ MLC ಸ್ಥಾನ ಕೊಡಿಸುವ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿರುವ ಈ ಪ್ರಕರಣದ ಹಿಂದೆ ಇನ್ನೂ ಯಾರ್ಯಾರ ಪಾತ್ರವಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
