ಕೇರಳದಲ್ಲಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಇಬ್ಬರು ಶಿಕ್ಷಕಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿ ಸಂಚಲನ ಮೂಡಿಸಿದೆ. ವಿದ್ಯಾರ್ಥಿಗಳಿಗೆ ನೈತಿಕತೆ ಮತ್ತು ಉತ್ತಮ ಮೌಲ್ಯಗಳನ್ನು ಬೋಧಿಸುತ್ತಿದ್ದ ಶಿಕ್ಷಕಿಯರೇ ಕೋಟಿ ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತು ಸಾಗಣೆ ಮತ್ತು ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತ ಮಹಿಳೆಯರನ್ನು ಕೂರಾಚುಂಡು ಮೂಲದ ಕಾವ್ಯಾ ಹಾಗೂ ಮರುತೋಂಕರಾ ಮೂಲದ ಕೀರ್ತನಾ ಎಂದು ಗುರುತಿಸಲಾಗಿದೆ. ಇಬ್ಬರೂ ಪೆರಂಬ್ರ ಬಿಆರ್‌ಸಿಯಲ್ಲಿ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ತನಿಖೆ ವೇಳೆ ಇವರು ಸಂಘಟಿತ ಮಾದಕ ವಸ್ತು ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಸೂಕ್ಷ್ಮ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೇರಳ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳ ಸಂಪರ್ಕ ಹಾಗೂ ಡ್ರಗ್ಸ್ ಜಾಲದ ವಿಸ್ತಾರದ ಬಗ್ಗೆ ತನಿಖೆ ಮುಂದುವರಿದಿದೆ.

ಶಿಕ್ಷಕಿಯರ ಬಂಧನದಿಂದ ಕೇರಳದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಿದ್ದವರೇ ಇಂತಹ ಗಂಭೀರ ಆರೋಪದಲ್ಲಿ ಸಿಲುಕಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related News

error: Content is protected !!