ಬೆಂಗಳೂರು ಪೂರ್ವ ತಾಲೂಕಿನ ಅವಲಹಳ್ಳಿ ಪೊಲೀಸ್ ಠಾಣೆಯ ಕೆಲ ಅಧಿಕಾರಿಗಳ ವಿರುದ್ಧ ಖಾಸಗಿ ಸಿಲಿಂಡರ್ ಮಾರಾಟಗಾರನೊಬ್ಬ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಆರೋಪದಲ್ಲಿ ದಾಳಿ ನಡೆಸಿದ ಪೊಲೀಸರು, ಪ್ರಕರಣ ದಾಖಲಿಸಿದ ಬಳಿಕ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆತ ದೂರಿದ್ದಾನೆ.
ಅಂಗಡಿ ಮಾಲೀಕರ ಹೇಳಿಕೆಯ ಪ್ರಕಾರ, ದಾಳಿಯ ವೇಳೆ ಪೊಲೀಸರು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು, ಪ್ರಕರಣವನ್ನು ಇತ್ಯರ್ಥಗೊಳಿಸುವ ಹೆಸರಿನಲ್ಲಿ ಈಗಾಗಲೇ ₹1.80 ಲಕ್ಷ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಜಾಮೀನು ಮಾಡಿಸಿಕೊಟ್ಟು ವಶಪಡಿಸಿಕೊಂಡ ಸಿಲಿಂಡರ್‌ಗಳನ್ನು ಬಿಡುಗಡೆ ಮಾಡಲು ಮತ್ತಷ್ಟು ₹1.25 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಣವನ್ನು ವಕೀಲರ ಶುಲ್ಕ, ನ್ಯಾಯಾಲಯದ ವೆಚ್ಚ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟು ಕೇಳಲಾಗಿದೆ ಎಂದು ಸಂತ್ರಸ್ತರು ಹೇಳಿದ್ದಾರೆ. ಅಲ್ಲದೆ, ತಮ್ಮ ಪರವಾಗಿ ವಕೀಲರನ್ನು ತಾವೇ ನೇಮಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕಾರ್ಯಾಚರಣೆಯನ್ನು ಅವಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಹರಿನಾಥ್ ಬಾಬು ನೇತೃತ್ವದಲ್ಲಿ ನಡೆಸಲಾಗಿದೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೂಚನೆ: ಮೇಲಿನ ಆರೋಪಗಳು ದೂರುದಾರರು ಮಾಡಿರುವ ಆರೋಪಗಳಾಗಿದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.
