ಬೆಂಗಳೂರು: ಹೊಸೂರು ರಸ್ತೆಯ ಕೂಡ್ಲು ಗೇಟ್ ಸಮೀಪ ಇರುವ ಎಸ್‌ಎನ್‌ಎನ್‌ ರಾಜ್ ಎಟರ್ನಿಯಾ ಅಪಾರ್ಟ್‌ಮೆಂಟ್ ಸಮುಚ್ಚಯದ 18 ಮಹಡಿಗಳ ಟವರ್‌ ಒಂದು ವಾಸಯೋಗ್ಯ ಪ್ರಮಾಣಪತ್ರ (Occupancy Certificate) ಪಡೆದ ಕೇವಲ ಮೂರು ತಿಂಗಳಲ್ಲೇ ಒಂದು ಬದಿಗೆ ವಾಲಿರುವುದು ಆತಂಕಕ್ಕೆ ಕಾರಣವಾಗಿದೆ. ನಿವಾಸಿಗಳು ಇನ್ನೂ ಗೃಹಪ್ರವೇಶ ಮಾಡುವ ಮುನ್ನವೇ ಸಮಸ್ಯೆ ಬೆಳಕಿಗೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಮರುನಿರ್ಮಾಣ ಮಾಡಲು ಬಿಲ್ಡರ್ ನಿರ್ಧರಿಸಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಕಾಲ ನಿರ್ಮಾಣಗೊಂಡ ಈ ಟವರ್‌ನಲ್ಲಿ ಒಟ್ಟು 49 ಫ್ಲ್ಯಾಟ್‌ಗಳಿವೆ. ಇಡೀ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ 15 ಟವರ್‌ಗಳಿದ್ದು, ಒಟ್ಟು 972 ಫ್ಲ್ಯಾಟ್‌ಗಳಲ್ಲಿ ಈಗಾಗಲೇ 822 ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಸಮಸ್ಯೆ ಕಾಣಿಸಿಕೊಂಡಿರುವುದು ಕೇವಲ ಒಂದು ಟವರ್‌ನಲ್ಲಿ ಮಾತ್ರವಾಗಿದ್ದು, ಉಳಿದ 14 ಟವರ್‌ಗಳು ಸುರಕ್ಷಿತವಾಗಿವೆ ಎಂದು ಬಿಲ್ಡರ್ ಸ್ಪಷ್ಟಪಡಿಸಿದ್ದಾರೆ.

ಆರು ತಿಂಗಳಲ್ಲಿ ನೆಲಸಮ, ಎರಡು ವರ್ಷಗಳಲ್ಲಿ ಹೊಸ ಟವರ್

ವಾಲಿರುವ ಟವರ್ ಅನ್ನು ಮುಂದಿನ ಆರು ತಿಂಗಳಲ್ಲಿ ಹಂತ ಹಂತವಾಗಿ ತೆರವುಗೊಳಿಸಿ, ಎರಡು ವರ್ಷಗಳೊಳಗೆ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಫ್ಲ್ಯಾಟ್‌ ಮಾಲೀಕರಿಗೆ ಹಸ್ತಾಂತರಿಸುವುದಾಗಿ ಬಿಲ್ಡರ್ ಭರವಸೆ ನೀಡಿದ್ದಾರೆ.

ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಬಿಲ್ಡರ್, ಕಟ್ಟಡವನ್ನು ನೆಲಸಮ ಮಾಡಲು ಅನುಮತಿ ನೀಡುವಂತೆ ಹಾಗೂ ಈ ಟವರ್‌ಗೆ ನೀಡಲಾಗಿದ್ದ ವಾಸಯೋಗ್ಯ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಕಟ್ಟಡ ವಾಲಲು ಕಾರಣವೇನು?

ಪ್ರಾಥಮಿಕ ಮಾಹಿತಿ ಪ್ರಕಾರ, ನಿರ್ಮಾಣಕ್ಕೂ ಮುನ್ನ ನಡೆಸಲಾಗಿದ್ದ ಮಣ್ಣಿನ ಪರೀಕ್ಷೆಯ ವರದಿಯಲ್ಲಿ ಉಂಟಾದ ಗಂಭೀರ ದೋಷವೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹಸ್ತಾಂತರಕ್ಕೂ ಮುನ್ನ ಬಿಲ್ಡರ್ ನಡೆಸಿದ ವಾಟರ್ ಲೋಡ್ ಪರೀಕ್ಷೆಯ ವೇಳೆ ಕಟ್ಟಡ ಒಂದು ಬದಿಗೆ ವಾಲುತ್ತಿರುವುದು ಹಾಗೂ ಅಡಿಪಾಯ ಭಾಗದಲ್ಲಿ ಕುಸಿತದ ಲಕ್ಷಣಗಳು ಕಂಡುಬಂದಿವೆ.

ಪ್ರಸ್ತುತ ಕಟ್ಟಡ ಹೊರನೋಟಕ್ಕೆ ಸುರಕ್ಷಿತವಾಗಿ ಕಂಡರೂ, ಮುಂದಿನ 10 ರಿಂದ 15 ವರ್ಷಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬೆಳವಣಿಗೆ ಫ್ಲ್ಯಾಟ್ ಖರೀದಿದಾರರಲ್ಲಿ ಆತಂಕ ಮೂಡಿಸಿದ್ದು, ನಿರ್ಮಾಣ ಗುಣಮಟ್ಟ ಮತ್ತು ಮಣ್ಣಿನ ಪರೀಕ್ಷೆಯ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಬಿಲ್ಡರ್ ಮಾತ್ರ, ನಿವಾಸಿಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಹೇಳಿದ್ದು, ಹೊಸ ಕಟ್ಟಡವನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Related News

error: Content is protected !!