ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಅನುಭವಿಸಿದ ಎರಡು ಚುನಾವಣಾ ಸೋಲುಗಳಿಗೆ ಕೊಪ್ಪಳ, ಕನಕಗಿರಿ ಹಾಗೂ ಯಲಬುರ್ಗಾ ಕ್ಷೇತ್ರಗಳ ಸ್ಥಳೀಯ ಕಾಂಗ್ರೆಸ್ ನಾಯಕರೇ ನೇರ ಹೊಣೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ವಿಶ್ವಾಸದಿಂದಲೇ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ ಎಂದು ಹೇಳಿದ ಅನ್ಸಾರಿ, ಪಕ್ಷವು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಿದ್ದರೂ, ಸ್ಥಳೀಯ ನಾಯಕರು ತಮ್ಮ ಗೆಲುವಿಗೆ ಸಹಕರಿಸುವ ಬದಲು ಸೋಲಿಸಲು ಒಳಗಿನಿಂದಲೇ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮನ್ನು ಸೋಲಿಸಿದವರನ್ನು ರಾಜಕೀಯವಾಗಿ ಸೋಲಿಸುವುದು ಕೇವಲ ಎರಡು ಸೆಕೆಂಡ್‌ಗಳ ಕೆಲಸ ಎಂದು ಹೇಳಿದ ಅನ್ಸಾರಿ, ಶುಕ್ರವಾರ ಮಸೀದಿಯಲ್ಲಿ ಒಂದು ಮನವಿ ಪತ್ರ ಓದಿಸಿದರೆ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೇಳಿದರು. ಆದರೆ ತಾವು ದೇವರ ಭಕ್ತರಾಗಿದ್ದು, ಅಂತಹ ದಾರಿಯನ್ನು ಅನುಸರಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ತಾವು ಜೆಡಿಎಸ್ ಅಥವಾ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ತಾವು ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

Related News

error: Content is protected !!