ಬಾಗಲಕೋಟೆ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಐದು ತಾಲ್ಲೂಕುಗಳ ತಹಶೀಲ್ದಾರ್‌ಗಳ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಜಿಲ್ಲಾ ಉಪ ನಿರ್ದೇಶಕರು, ಜಿಲ್ಲಾಧಿಕಾರಿ ಹಾಗೂ ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಮತ್ತು ಇಲ್ಕಲ್ ತಾಲ್ಲೂಕುಗಳ ತಹಶೀಲ್ದಾರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.
ಲೋಕಾಯುಕ್ತ ತಂಡಗಳು ಹುನಗುಂದ, ಇಲ್ಕಲ್, ಬಾದಾಮಿ ಮತ್ತು ಮುಧೋಳ ತಾಲ್ಲೂಕುಗಳಲ್ಲಿ ಒಟ್ಟು 41 ಮರಳು ಗಣಿಗಾರಿಕೆ ಪ್ರದೇಶಗಳನ್ನು ಪರಿಶೀಲಿಸಿದಾಗ, ಕೇವಲ 9 ಸ್ಥಳಗಳಿಗೆ ಮಾತ್ರ ಕಾನೂನುಬದ್ಧ ಅನುಮತಿ ಇರುವುದಾಗಿ ಕಂಡುಬಂದಿದೆ. ಉಳಿದ ಎಲ್ಲಾ ಸ್ಥಳಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ದಾಳಿಯ ವೇಳೆ 62 ಟಿಪ್ಪರ್ ಲಾರಿಗಳು, ಎರಡು ಟ್ರ್ಯಾಕ್ಟರ್‌ಗಳು, 24 ಅಗೆಯುವ ಯಂತ್ರಗಳು, 15 ದೋಣಿಗಳು ಸೇರಿದಂತೆ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಹಲವು ಯಂತ್ರೋಪಕರಣಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ 25 ಪ್ರಕರಣಗಳು ದಾಖಲಾಗಿವೆ.
ಲೋಕಾಯುಕ್ತ ವರದಿ ಪ್ರಕಾರ, ಕೃಷಿ ಭೂಮಿ, ನದಿ ದಂಡೆ ಹಾಗೂ ಹೊಳೆಗಳಲ್ಲಿ 15ರಿಂದ 20 ಅಡಿ ಆಳದವರೆಗೆ ಭಾರೀ ಯಂತ್ರೋಪಕರಣಗಳನ್ನು ಬಳಸಿ ಮರಳು ಅಗೆದು ಪರಿಸರಕ್ಕೆ ಭಾರೀ ಹಾನಿ ಉಂಟುಮಾಡಲಾಗಿದೆ. ಇದರಿಂದ ನದಿಪಾತ್ರ, ಕೃಷಿ ಭೂಮಿ ಹಾಗೂ ಸಾರ್ವಜನಿಕ ರಸ್ತೆಗಳಿಗೆ ಹಾನಿಯಾಗಿರುವುದು ಪರಿಶೀಲನೆಯಲ್ಲಿ ದೃಢಪಟ್ಟಿದೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆಗಳು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಲೋಕಾಯುಕ್ತರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ದಾಳಿಯ ವೇಳೆ ಸಂಗ್ರಹಿಸಿದ ವಿಡಿಯೊ, ಛಾಯಾಚಿತ್ರಗಳು ಹಾಗೂ ಡ್ರೋನ್ ದೃಶ್ಯಾವಳಿಗಳು ಅಕ್ರಮ ಗಣಿಗಾರಿಕೆಗೆ ಸ್ಪಷ್ಟ ಸಾಕ್ಷಿಯಾಗಿದ್ದು, ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟ ಉಂಟಾಗಿರುವ ಸಾಧ್ಯತೆ ಇದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
