ಮಹಾರಾಷ್ಟ್ರದಲ್ಲಿ ಆಹಾರ ಕಲಬೆರಕೆ ವಿರುದ್ಧ ಕಠಿಣ ಕ್ರಮಗಳ ಮೂಲಕ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಸದ್ಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೇ 25ರಂದು ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಕೇವಲ 55 ದಿನಗಳಲ್ಲೇ ಆಹಾರ ಸುರಕ್ಷತೆಗಾಗಿ ಅವರು ಕೈಗೊಂಡ ಕ್ರಮಗಳು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಅವರ ದಾಳಿಯ ಭೀತಿಯಿಂದಲೇ ಹಲವು ಕಡೆ ಕಲಬೆರಕೆ ಹಾಲು ಮತ್ತು ಆಹಾರ ಪದಾರ್ಥಗಳನ್ನು ತಯಾರಕರು ತಾವೇ ನಾಶಪಡಿಸುತ್ತಿದ್ದಾರೆ ಎನ್ನಲಾಗಿದೆ.
ಈ ಅವಧಿಯಲ್ಲಿ ಎಫ್‌ಡಿಎ ತಂಡವು ರಾಜ್ಯದಾದ್ಯಂತ 900ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, 235 ಎಫ್‌ಐಆರ್‌ಗಳನ್ನು ದಾಖಲಿಸಿದೆ. 350ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, 274 ಆಹಾರ ಉತ್ಪಾದನಾ ಘಟಕಗಳನ್ನು ಮುಚ್ಚಲಾಗಿದೆ. ಶುಚಿತ್ವದ ಕೊರತೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದ ಹಲವು ಹೋಟೆಲ್, ಬೇಕರಿ ಹಾಗೂ ಆಹಾರ ಮಳಿಗೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಹಾಲಿನ ಮಾದರಿಗಳ ಪರೀಕ್ಷೆಯಲ್ಲಿ ಸುಮಾರು 79 ಶೇಕಡಾ ಮಾದರಿಗಳು ಗುಣಮಟ್ಟದಲ್ಲಿ ವಿಫಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾವಿರಾರು ಲೀಟರ್ ಕಲಬೆರಕೆ ಹಾಲು, ಕೋಟ್ಯಂತರ ರೂಪಾಯಿ ಮೌಲ್ಯದ ಕಳಪೆ ಎಣ್ಣೆ, ರಾಸಾಯನಿಕಗಳು ಹಾಗೂ ನಕಲಿ ಸಿಹಿತಿಂಡಿಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಪಾಕಿಸ್ತಾನ ಮೂಲದ ಬ್ರ್ಯಾಂಡ್ ಇಲ್ಲದ ಫೇಸ್ ಕ್ರೀಮ್‌ನಲ್ಲಿ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಲವನ್ನೂ ಭೇದಿಸಲಾಗಿದೆ ಎನ್ನಲಾಗಿದೆ. ಈ ಕಟ್ಟುನಿಟ್ಟಿನ ಕ್ರಮಗಳಿಂದ ಗುಣಮಟ್ಟದ ಹಾಲಿನ ಬೇಡಿಕೆ ಹೆಚ್ಚಾಗಿ, ರಾಜ್ಯದಲ್ಲಿ ಹಾಲು ಹಾಗೂ ಪನೀರ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂಬ ವರದಿಗಳಿವೆ.
25 ವರ್ಷಗಳ ಸೇವಾವಧಿಯಲ್ಲಿ 21 ಬಾರಿ ವರ್ಗಾವಣೆಯಾಗಿರುವ ತುಕಾರಾಮ್ ಮುಂಡೆ ಅವರ ವಿರುದ್ಧ ವರ್ಗಾವಣೆ ಮಾಡಲು ಭಾರೀ ಲಂಚದ ಆಫರ್ ಬಂದಿತ್ತು ಎಂಬ ವಿಚಾರವೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಳ್ಳುತ್ತಿರುವ ಅವರ ಕಾರ್ಯವೈಖರಿ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಇಂತಹ ಪ್ರಾಮಾಣಿಕ ಅಧಿಕಾರಿಗಳು ಎಲ್ಲ ರಾಜ್ಯಗಳಲ್ಲೂ ಇರಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
