ಬೆಂಗಳೂರು: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಇಬ್ಬರು ಆರೋಪಿಗಳಾದ ಕಲ್ಪನಾ (ಎ1) ಹಾಗೂ ಜಾವಿದ್ ಪಾಷಾ (ಎ2) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಸಿಎಚ್-67 ನ್ಯಾಯಾಲಯದ ನ್ಯಾಯಾಧೀಶ ಎ. ಜಯಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ ₹25,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ವಿವರಗಳ ಪ್ರಕಾರ, 2017ರ ಏಪ್ರಿಲ್ 18ರಂದು ಯಶವಂತಪುರದಲ್ಲಿರುವ ಮನೆಯಲ್ಲಿ ಸತೀಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಕಲ್ಪನಾ ತನ್ನ ಪ್ರಿಯಕರ ಜಾವಿದ್ ಪಾಷಾ ಜೊತೆ ಸೇರಿ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಆರೋಪಿಗಳು ಮೊದಲು ಚೂಡಿದಾರ್ ಪ್ಯಾಂಟ್ನಿಂದ ಸತೀಶ್ ಅವರ ಕುತ್ತಿಗೆ ಬಿಗಿದು, ಬಳಿಕ ಕಲ್ಲಿನಿಂದ ಮುಖಕ್ಕೆ ಹೊಡೆದು ಹತ್ಯೆ ನಡೆಸಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಕೊಲೆ ಬಳಿಕ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಮೃತನ ಮೊಬೈಲ್ ಸಿಮ್ ಕಾರ್ಡ್ ಅನ್ನು ಮುರಿದು ಎಸೆದಿದ್ದರು ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸಿದ್ದ ಯಶವಂತಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ವೈ. ಮುದ್ದುರಾಜ್ ಅವರು ನ್ಯಾಯಾಲಯಕ್ಕೆ ಸಮಗ್ರ ಚಾರ್ಜ್ಶೀಟ್ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳು ಮತ್ತು ವಾದ-ಪ್ರತಿವಾದಗಳನ್ನು ಪರಿಗಣಿಸಿದ ನ್ಯಾಯಾಲಯ ಇದೀಗ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
