ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ನಡೆದ ಭೀಕರ ದ್ವಿ-ಕೊಲೆ ಪ್ರಕರಣವು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪತ್ನಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ವ್ಯಕ್ತಿಯೊಬ್ಬ, ರಾಜೀ ಪಂಚಾಯಿತಿ ನಡೆಸಲು ಮನೆಗೆ ಬಂದಿದ್ದ ತನ್ನ ಮಾವನೊಂದಿಗೆ ಪತ್ನಿಯನ್ನೇ ಮಚ್ಚಿನಿಂದ ಕಡಿದು, ಬಳಿಕ ಸಿಮೆಂಟ್ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ನಾಗಲಕ್ಷ್ಮೀ (24) ಮತ್ತು ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಲಕ್ಷ್ಮೀ ಅವರ ಪತಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ್ (50) ಅವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ತೇಜಾ ತನ್ನ ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಕುಟುಂಬದಲ್ಲಿ ಉಂಟಾಗಿದ್ದ ಕಲಹವನ್ನು ಬಗೆಹರಿಸುವ ಉದ್ದೇಶದಿಂದ ನಾಗಲಕ್ಷ್ಮೀ ಅವರ ತಂದೆ ಶ್ರೀನಿವಾಸ ಮಗಳ ಮನೆಗೆ ರಾಜೀ ಪಂಚಾಯಿತಿಗಾಗಿ ಬಂದಿದ್ದರು. ಆದರೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು, ತಂದೆ-ಮಗ ಇಬ್ಬರೂ ಸೇರಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಸಿಮೆಂಟ್ ಕಲ್ಲಿನಿಂದ ಜಜ್ಜಿ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಗಮನಿಸಿದ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಹರ್ಷಗುಪ್ತ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಸಮಗ್ರವಾಗಿ ಹಾಗೂ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ದಾರುಣ ಘಟನೆ ಗುಗ್ಗರಹಟ್ಟಿ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕುಟುಂಬ ಕಲಹ ಮತ್ತು ಶೀಲ ಶಂಕೆಯ ಪರಿಣಾಮವಾಗಿ ಎರಡು ಅಮೂಲ್ಯ ಜೀವಗಳು ಬಲಿಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Related News

error: Content is protected !!