ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಟ್ಕಳದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಭಟ್ಕಳ ತಾಲೂಕಿನ ಸಣಭಾವಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ್ (23) ಹಾಗೂ ಹಡವು ಮೂಲದ ಪೆಟ್ರಿಕ್ ವಾಜ್ (63) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಬೈಂದೂರು ಕಡೆಯಿಂದ ಕುಂದಾಪುರದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ದೀಪಕ್ ಅವರ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ವಾಹನ ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡ ದೀಪಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಇನ್ನೊಂದೆಡೆ, ಗಂಭೀರ ಗಾಯಗೊಂಡ ಪೆಟ್ರಿಕ್ ವಾಜ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಪೆಟ್ರಿಕ್ ವಾಜ್ ಅವರ ಪುತ್ರಿಯೂ ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಗಂಗೊಳ್ಳಿ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದುರ್ಘಟನೆಯಿಂದ ಮೃತರ ಕುಟುಂಬಗಳಲ್ಲಿ ಹಾಗೂ ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
