ಪ್ರೀತಿ ಮತ್ತು ಅಕ್ರಮ ಸಂಬಂಧಗಳ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅತ್ತೆ ಮತ್ತು ಸೋದರಳಿಯ ನಡುವಿನ ಅಕ್ರಮ ಸಂಬಂಧ ಕೊನೆಗೆ ಕೊಲೆ ಹಾಗೂ ಆತ್ಮಹತ್ಯೆಯ ಶಂಕೆಗೆ ಕಾರಣವಾಗಿದ್ದು, ಇಬ್ಬರ ಸಾವಿನ ಸುತ್ತ ನಿಗೂಢತೆ ಆವರಿಸಿದೆ.
ಮೃತರನ್ನು ದೆಬಾಶಿಶ್ ಮೊಂಡಲ್ (32) ಹಾಗೂ ರುನು ಮೊಂಡಲ್ (33) ಎಂದು ಗುರುತಿಸಲಾಗಿದೆ. ಇಬ್ಬರೂ ಬಸಿರ್ಹತ್ನ ತತ್ರಾ ಪ್ರದೇಶದ ನಿವಾಸಿಗಳಾಗಿದ್ದು, ರುನುಗೆ ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಬಳಿಕ ತವರು ಮನೆಗೆ ಆಗಾಗ್ಗೆ ಬರುತ್ತಿದ್ದ ವೇಳೆ ಸೋದರಳಿಯನಾಗಬೇಕಿದ್ದ ದೆಬಾಶಿಶ್ನೊಂದಿಗೆ ಪರಿಚಯ ಬೆಳೆದಿತ್ತು.
ಕಾಲಕ್ರಮೇಣ ಈ ಪರಿಚಯ ಪ್ರೇಮ ಸಂಬಂಧವಾಗಿ ಬದಲಾಗಿದ್ದು, ಬಳಿಕ ಇಬ್ಬರೂ ತಮ್ಮ ಕುಟುಂಬಗಳಿಂದ ದೂರವಾಗಿ ಬಸಿರ್ಹತ್ನ ಬಾಡಿಗೆ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಈ ಸಂಬಂಧದಿಂದ ದೆಬಾಶಿಶ್ ಬೇಸತ್ತಿದ್ದ ಎನ್ನಲಾಗಿದೆ. ಆತ ಮಾನಸಿಕ ಒತ್ತಡದಲ್ಲಿದ್ದು, ಮನೆಗೆ ಮರಳಲು ಬಯಸುತ್ತಿರುವುದಾಗಿ ತಂದೆಗೆ ಕರೆ ಮಾಡಿ ಹೇಳಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಘಟನೆ ನಡೆದ ಕೆಲವೇ ಸಮಯದ ಬಳಿಕ ದೆಬಾಶಿಶ್ ತಂದೆಗೆ ರುನು ಕರೆ ಮಾಡಿ, “ನಾನು ದೆಬಾಶಿಶ್ನನ್ನು ಕೊಲೆ ಮಾಡಿದ್ದೇನೆ. ಈಗ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಮಾಹಿತಿ ತಿಳಿದ ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಬಸಿರ್ಹತ್ ರೈಲು ನಿಲ್ದಾಣ ಸಮೀಪದ ಅನಂತಪುರದಲ್ಲಿ ರೈಲ್ವೆ ಹಳಿಗಳ ಮೇಲೆ ರುನು ಅವರ ಮೃತದೇಹ ಪತ್ತೆಹಚ್ಚಿದ್ದಾರೆ.
ಬಳಿಕ ಇಬ್ಬರೂ ವಾಸಿಸುತ್ತಿದ್ದ ಮೋಯಿಲಾಖೋಲಾ ಬಳಿಯ ಬಾಡಿಗೆ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ, ದೆಬಾಶಿಶ್ ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿರುವ ದೆಬಾಶಿಶ್ ಕುಟುಂಬಸ್ಥರು, ರುನು ಮೊದಲು ದೆಬಾಶಿಶ್ನನ್ನು ಹತ್ಯೆ ಮಾಡಿ ಬಳಿಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ರುನು ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಸದ್ಯ ಪೊಲೀಸರು ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಇದು ಕೊಲೆ ಮತ್ತು ಆತ್ಮಹತ್ಯೆಯ ಪ್ರಕರಣವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
