ಹರಿಹರ: ರೈತ ಮಹಿಳೆಯ ಜಮೀನಿನ ಸರ್ವೇ ಸ್ಕೆಚ್ ತಯಾರಿಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಹರಿಹರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇ ಸೂಪರ್ವೈಸರ್ ರಾಮಪ್ಪ ಅಡಿವೆಪ್ಪ ದಾಸರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಸರ್ಕಾರದ ಪರವಾನಗಿ ಪಡೆದ ಸರ್ವೆಯರ್ ಆನಂದಪ್ಪ ಅವರನ್ನೂ ಬಂಧಿಸಲಾಗಿದೆ.
ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದ ರೈತ ಮಹಿಳೆ ಶೋಭಾ ಅವರು, ಸರ್ವೇ ನಂ. 68/3ರಲ್ಲಿ ಇರುವ ಜಮೀನಿನ 11ಇ ಸರ್ವೇ ಸ್ಕೆಚ್ ಸಿದ್ಧಪಡಿಸಿ ನೀಡುವಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಸರ್ವೇ ಸೂಪರ್ವೈಸರ್ ರಾಮಪ್ಪ ದಾಸರ್ ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಲಂಚ ನೀಡಲು ನಿರಾಕರಿಸಿದ ಶೋಭಾ ಅವರು ತಮ್ಮ ಸಂಬಂಧಿ ಕೆ.ಪಿ. ರುದ್ರೇಶ್ ಅವರಿಗೆ ವಿಷಯ ತಿಳಿಸಿದ್ದು, ಅವರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಕೌಲಪುರೆ ನೇತೃತ್ವದ ತಂಡ ಬಲೆ ಬೀಸಿ, ಶನಿವಾರ ಬೆಳಿಗ್ಗೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಮಪ್ಪ ದಾಸರ್ ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದೆ.
ತನಿಖೆ ವೇಳೆ ಸರ್ಕಾರದ ಪರವಾನಗಿ ಪಡೆದ ಸರ್ವೆಯರ್ ಆನಂದಪ್ಪ ಅವರು ತಮ್ಮ ಪತ್ನಿ ಸುನಿತಾ ಅವರ ಫೋನ್ಪೇ ಖಾತೆಗೆ ₹7 ಸಾವಿರ ವರ್ಗಾಯಿಸಿಕೊಳ್ಳುವ ಮೂಲಕ ಲಂಚ ಸ್ವೀಕರಿಸಿರುವುದು ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲಂಚ ಸ್ವೀಕರಿಸಿದ ಆರೋಪದಡಿ ರಾಮಪ್ಪ ದಾಸರ್ ಹಾಗೂ ಆನಂದಪ್ಪ ಇಬ್ಬರನ್ನೂ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ದಾಳಿಯಲ್ಲಿ ಡಿವೈಎಸ್ಪಿ ಮೃತ್ಯುಂಜಯ, ಸಿಪಿಐ ಗುರುಬಸವರಾಜ ಹಾಗೂ ಪಿಎಸ್ಐ ಸರಳಾ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು.
