ಗೋವಾ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತಳಾದ ಮಹಿಳೆಯೊಬ್ಬಳು, ಉಡುಪಿ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ನಿಗೂಢ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಹೊರಹೊಮ್ಮಿದ್ದಾಳೆ. ಇದೇ ಮಹಿಳೆ ಈ ಹಿಂದೆ ಗುಜರಾತ್ ಮೂಲದ ಉದ್ಯಮಿಯನ್ನು ಹನಿ ಟ್ರ್ಯಾಪ್‌ಗೆ ಸೆಳೆದು ದರೋಡೆ ನಡೆಸಿದ ಪ್ರಕರಣದಲ್ಲಿಯೂ ಭಾಗಿಯಾಗಿದ್ದಳು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಸಿ. ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಮಂಗಳೂರಿನ ನಿವಾಸಿ. ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ಜುಲೈ 3ರ ರಾತ್ರಿ ಆಕೆಯನ್ನು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿಯಾಗಿದ್ದ ಜಲಕ್ರೀಡಾ ದೋಣಿ ಉದ್ಯಮಿ ಸಂದೀಪ್ ಸಾಲಿಯಾನ್ (42) ಅವರ ಸಾವಿನ ಪ್ರಕರಣದಲ್ಲಿ ಅಕ್ಷತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ಆಕೆಯ ಅಪರಾಧ ಚಟುವಟಿಕೆಗಳ ಬಗ್ಗೆ ಹಲವು ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ.

ಪೊಲೀಸರ ಮಾಹಿತಿ ಪ್ರಕಾರ, ಅಕ್ಷತಾ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕ್ಯಾಸಿನೋಗಳಿಗೆ ಆಮಿಷವೊಡ್ಡುತ್ತಿದ್ದಳು. ಬಳಿಕ ಅವರನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಪ್ರಜ್ಞಾಹೀನರನ್ನಾಗಿ ಮಾಡಿ ಹಣ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಹನಿ ಟ್ರ್ಯಾಪ್ ಮೂಲಕ ಸಿಲುಕಿಸಿ ಬ್ಲ್ಯಾಕ್‌ಮೇಲ್ ಮಾಡುವ ಕೃತ್ಯಗಳಲ್ಲೂ ತೊಡಗಿದ್ದಳು ಎನ್ನಲಾಗಿದೆ.

ಇದಕ್ಕೂ ಮುನ್ನ ಗುಜರಾತ್ ಮೂಲದ ಉದ್ಯಮಿ ತೋಮೇಶ್ ಯಾದವ್ ಅವರನ್ನು ಇದೇ ರೀತಿಯಲ್ಲಿ ಬಲೆಗೆ ಬೀಳಿಸಿ, ಪ್ರಜ್ಞಾಹೀನರನ್ನಾಗಿ ಮಾಡಿ ಸುಮಾರು ₹2.40 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪವೂ ಆಕೆಯ ಮೇಲಿದೆ. ಈ ಸಂಬಂಧ ಪಣಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯ ವಿರುದ್ಧ ಮತ್ತೊಂದು ಕಳ್ಳತನದ ಪ್ರಕರಣವೂ ದಾಖಲಾಗಿದೆ.

ಸಂದೀಪ್ ಸಾಲಿಯಾನ್ ಅವರು ಆರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರೊಬ್ಬರ ಬಳಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಆ ಉದ್ಯೋಗ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿ ಉದ್ಯಮ ಆರಂಭಿಸಿದ್ದರು. ತಮ್ಮ ಪರಿಶ್ರಮದಿಂದ ಅಲ್ಪಾವಧಿಯಲ್ಲೇ ಯಶಸ್ಸು ಗಳಿಸಿ, ಉಡುಪಿ ಜಿಲ್ಲೆಯ ಜಲಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ಸದ್ಯ ಬಂಧಿತ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.

Related News

error: Content is protected !!