ಒಂದು ಕಾಲದಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಮಿಂಚಿದ್ದ ನಟಿ ರೇಖಾ ವೇದವ್ಯಾಸ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡದ ಹುಚ್ಚ, ಚೆಲ್ಲಾಟ, ಹುಡುಗಾಟ, ಬಾಸ್ ಹಾಗೂ ತೆಲುಗಿನ ಆನಂದಂ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ಇದೀಗ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾ ರೀ-ಎಂಟ್ರಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

2001ರಲ್ಲಿ ಬಿಡುಗಡೆಯಾದ ಆನಂದಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರೇಖಾ, ಬಳಿಕ ಕನ್ನಡದಲ್ಲಿ ಕಿಚ್ಚ ಸುದೀಪ್, ದರ್ಶನ್ ಹಾಗೂ ಗಣೇಶ್ ಅವರೊಂದಿಗೆ ನಟಿಸಿ ಯಶಸ್ಸಿನ ಶಿಖರಕ್ಕೇರಿದ್ದರು. ನಂತರ ಆರೋಗ್ಯ ಸಮಸ್ಯೆಗಳ ಕಾರಣದಿಂದ ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಅವರು, ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳಲು ಸಜ್ಜಾಗಿದ್ದಾರೆ.
ಪ್ರಸ್ತುತ 41 ವರ್ಷದ ರೇಖಾ ವೇದವ್ಯಾಸ್ ಇನ್ನೂ ವಿವಾಹವಾಗಿಲ್ಲ. ಈ ಕುರಿತು ಮಾತನಾಡಿದ ಅವರು, “ಸಲ್ಮಾನ್ ಖಾನ್ ಅವರಂತೆ ನಾನೂ ಜೀವನಪೂರ್ತಿ ಸಿಂಗಲ್ ಆಗಿಯೇ ಉಳಿದುಬಿಡುತ್ತೇನೋ ಎಂಬ ಅನಿಸಿಕೆ ಬರುತ್ತಿದೆ. ಹಿಂದೆ ಒಬ್ಬರನ್ನು ತುಂಬಾ ಇಷ್ಟಪಟ್ಟಿದ್ದೆ. ಆದರೆ ನನ್ನ ಪ್ರೀತಿಯನ್ನು ಅವರಿಗೆ ಹೇಳುವ ಧೈರ್ಯ ಆಗಲಿಲ್ಲ. ನಂತರ ನನಗೆ ಮನಸ್ಸಿಗೆ ಇಷ್ಟವಾಗುವಂತಹ ವ್ಯಕ್ತಿ ಸಿಗಲಿಲ್ಲ. ನನ್ನ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದರೂ, ನಿಜವಾಗಿ ನಾನು ಇನ್ನೂ ಸಿಂಗಲ್ ಆಗಿದ್ದೇನೆ” ಎಂದು ಹೇಳಿದ್ದಾರೆ.

ಇದೇ ವೇಳೆ, “ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ನಾನೂ ಪರಿಪೂರ್ಣಳಲ್ಲ. ಆದರೆ ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುವ, ಗೌರವಿಸುವ ಒಳ್ಳೆಯ ವ್ಯಕ್ತಿ ಬೇಕು. ಅಂತಹವರು ಇದ್ದರೆ ಇನ್‌ಸ್ಟಾಗ್ರಾಂನಲ್ಲಿ ನನಗೆ ಮೆಸೇಜ್ ಮಾಡಬಹುದು. ಅವರ ವ್ಯಕ್ತಿತ್ವ ನನಗೆ ಇಷ್ಟವಾದರೆ ಖಂಡಿತವಾಗಿ ಪ್ರತಿಕ್ರಿಯಿಸುತ್ತೇನೆ. ಪ್ರೀತಿಯಲ್ಲಿ ತಾಳ್ಮೆ, ನಂಬಿಕೆ ಮತ್ತು ಪಾವಿತ್ರ್ಯತೆ ಇರಬೇಕು ಎಂಬುದು ನನ್ನ ನಂಬಿಕೆ” ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರೇಖಾ, ತಮ್ಮ ಹೊಸ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ವಿವಿಧ ಸಂದರ್ಶನಗಳ ಮೂಲಕ ಚಿತ್ರರಂಗದಲ್ಲಿ ಮತ್ತೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅವರ ಈ ಹೇಳಿಕೆಗಳು ಸದ್ಯ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ವಲಯದಲ್ಲಿ ಸಾಕಷ್ಟು ವೈರಲ್ ಆಗಿವೆ.
