ಕಿತ್ತೂರು: ಕಿತ್ತೂರು ಹಾಗೂ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಕಿತ್ತೂರು ಪೊಲೀಸರು, ಇಬ್ಬರು ಅಂತರ-ತಾಲ್ಲೂಕು ಮನೆಗಳ್ಳರನ್ನು ಬಂಧಿಸಿ ಸುಮಾರು ₹9 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳು, ಒಂದು ಎರ್ಟಿಗಾ ಕಾರು ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಕಿತ್ತೂರು ಸಮೀಪದ ಅವರಾದಿ ಹಾಗೂ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಚಿಕ್ಕ ನಂದಿಹಳ್ಳಿ ಕ್ರಾಸ್ ಸಮೀಪ ಪತ್ರಯ್ಯ ನಿಂಗಯ್ಯ ಹಿರೇಮಠ (ಹೊಳಿ ನಾಗಲಾಪುರ) ಹಾಗೂ ಅನಿಲಕುಮಾರ ಪ್ರಭುಸ್ವಾಮಿ ಹಿರೇಮಠ (ಗುಂಡ್ಲೂರ ಚಾಳ್, ಬೈಲಹೊಂಗಲ) ಅವರನ್ನು ಮೋಟಾರ್ ಸೈಕಲ್ ಹಾಗೂ ಕಳವು ಮಾಡಿದ್ದ ಕೆಲವು ಬೆಳ್ಳಿ ಆಭರಣಗಳೊಂದಿಗೆ ಬಂಧಿಸಿದ್ದರು.
ಅವರಾದಿ ಗ್ರಾಮದ ನಿವಾಸಿ ರೇಣುಕಾ ಆನಂದ ಪುರದ ಅವರ ಮನೆಯ ಮೇಲ್ಛಾವಣಿಯ ಹಂಚುಗಳನ್ನು ತೆಗೆದು ಒಳನುಗ್ಗಿದ ಆರೋಪಿಗಳು, ಮನೆಯ ಟ್ರೆಜರಿಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಡಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ವೇಳೆ, ಅವರು ನೀಡಿದ ಸ್ವಇಚ್ಛಾ ಹೇಳಿಕೆಯ ಆಧಾರದ ಮೇಲೆ ಕಿತ್ತೂರು ಹಾಗೂ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಆಭರಣಗಳನ್ನು ವಿವಿಧ ಹಣಕಾಸು ಸಂಸ್ಥೆಗಳಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳವು ಮಾಡಿದ ಚಿನ್ನಾಭರಣಗಳನ್ನು ಬೈಲಹೊಂಗಲದ ಮಣಪುರಂ ಗೋಲ್ಡ್ ಫೈನಾನ್ಸ್, ಮುತ್ತೂಟ್ ಫೈನಾನ್ಸ್, ಕಿತ್ತೂರಿನ ಮುತ್ತೂಟ್ ಮಣಿ ಫೈನಾನ್ಸ್, ಹುಕ್ಕೇರಿಯ ಮುತ್ತೂಟ್ ಫಿನ್ಕಾರ್ಪ್ ಹಾಗೂ ಬೆಳಗಾವಿಯ ಖಡೇಬಜಾರ್ನ ಮುತ್ತೂಟ್ ಎಕ್ಸಿಮ್ ಫೈನಾನ್ಸ್ನಲ್ಲಿ ಅಡ ಇಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರು ಒಟ್ಟು 60 ಗ್ರಾಂ ತೂಕದ ಚಿನ್ನಾಭರಣ, ₹15 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ ಸುಮಾರು ₹9 ಲಕ್ಷ ಮೌಲ್ಯದ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಳುವಿನಿಂದ ಬಂದ ಹಣವನ್ನು ಕಾರಿನ ಸಾಲ ತೀರಿಸಲು ಬಳಸಿದ್ದ ಆರೋಪಿಗಳು ಕಳ್ಳತನಕ್ಕೆ ಬಳಸಿದ್ದ ಮಾರುತಿ ಸುಜುಕಿ ಎರ್ಟಿಗಾ ಕಾರು ಹಾಗೂ ದ್ವಿಚಕ್ರ ವಾಹನವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಹಾಗೂ ಸಿಪಿಐ ಶಿವಾನಂದ ಬಿ. ಗುಡಗನಟ್ಟಿ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಭರತ್ ಎಸ್., ಪಿಎಸ್ಐ ಗಂಗಾಧರ ಜಿ. ಹಂಪಣ್ಣವರ ಹಾಗೂ ಕಿತ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಬೆಳಗಾವಿ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಯ ತಂಡದಿಂದ ಯಶಸ್ವಿಯಾಗಿ ನಡೆಸಲಾಯಿತು.
ತಂಡದ ಅತ್ಯುತ್ತಮ ಕಾರ್ಯಾಚರಣೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ಶ್ಲಾಘಿಸಿದ್ದಾರೆ.
