ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ದುಃಖಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಮಗನನ್ನು ಕಳೆದುಕೊಂಡೆ ಎಂದು ಮೃತ ಬಾಲಕನ ತಂದೆ ಆರೋಪಿಸಿದ್ದಾರೆ.
ಮೃತ ಬಾಲಕನ ತಂದೆ ಪುಟ್ಟಪ್ಪ ನಾಯ್ಕ ತಮ್ಮ ನೋವನ್ನು ವ್ಯಕ್ತಪಡಿಸಿ, ರಾತ್ರಿ ವೇಳೆ ಇಬ್ಬರು ಮಕ್ಕಳಿಗೂ ವಾಂತಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಆಹಾರ ಸಂಬಂಧಿತ ಸಮಸ್ಯೆಯಾಗಿರಬಹುದು ಎಂದು ಭಾವಿಸಿದ್ದರೂ, ಬಳಿಕ ಮನೆಯ ಸಮೀಪ ಹಾವು ಕಂಡುಬಂದ ಹಿನ್ನೆಲೆ ಬೆಳಗಿನ ಜಾವ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ತಲುಪಿದ ಬಳಿಕ ಚಿಕಿತ್ಸೆ ಆರಂಭವಾದರೂ, ಮಗನ ಕಿವಿಯ ಹತ್ತಿರ ಕಚ್ಚಿದ ಗಾಯವಿದ್ದ ಮಾಹಿತಿ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಬಳಿಕ ಬಾಲಕನ ಆರೋಗ್ಯ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ತಂದೆ ಹೇಳಿದ್ದಾರೆ. ಇದೇ ವೇಳೆ ಹಾವು ಕಚ್ಚಿದ್ದ ಮಗಳಿಗೆ ಚಿಕಿತ್ಸೆ ನೀಡಿ ಗುಣಮುಖಳಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಳಿಕ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಅನಂತಮೂರ್ತಿ ಹೆಗಡೆ, ಆರ್ಥಿಕ ನೆರವು ನೀಡಿದ್ದು, ಅಗತ್ಯವಿದ್ದಲ್ಲಿ ಬಾಲಕಿಯ ಮುಂದಿನ ಚಿಕಿತ್ಸೆಗೆ ಸಹ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಘಟನೆ ಕುರಿತು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related News

error: Content is protected !!