ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ನಾಡಬಾಂಬ್ (ಸ್ಫೋಟಕ ವಸ್ತು) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.

ಜೂನ್ 22ರಂದು ಕಾಳಗಿನಕೊಪ್ಪ ಗ್ರಾಮದ ವಸಂತ ವಾಸು ರಾಯಪ್ಪ ಕೊರವರ ಎಂಬಾತ ತನ್ನ ಮನೆಯಲ್ಲಿ ನಾಡಬಾಂಬ್‌ಗಳನ್ನು ಸಂಗ್ರಹಿಸಿಟ್ಟಿದ್ದ ವೇಳೆ ಅವು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದವು. ಸ್ಫೋಟದ ಪರಿಣಾಮವಾಗಿ ಆರೋಪಿಯ ಮನೆ, ಮನೆಯ ಮೇಲ್ಛಾವಣಿಯ ಹಂಚುಗಳು, ಅಡುಗೆ ಮನೆಯ ಕಿಟಕಿಯ ಗಾಜುಗಳು ಹಾಗೂ ಸುತ್ತಮುತ್ತಲಿನ ಮನೆಗಳ ಹಂಚು ಮತ್ತು ಬಾಗಿಲುಗಳು ಹಾನಿಗೊಳಗಾಗಿದ್ದು, ಸುಮಾರು ₹1.15 ಲಕ್ಷ ಮೌಲ್ಯದ ಆಸ್ತಿ ನಷ್ಟ ಉಂಟಾಗಿತ್ತು.

ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಯಾದ ಎ-1 ವಸಂತ ವಾಸು ರಾಯಪ್ಪ ಕೊರವರನನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೀಗ ಪ್ರಕರಣದ ಮತ್ತೋರ್ವ ಆರೋಪಿತನಾದ ಎ-2 ಮುನೇಶ್ವರ ಮುನ್ಯಾ ವಸಂತ ಕೊರವರ (23) ಎಂಬಾತನನ್ನು ಜೂನ್ 26ರಂದು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ದಸ್ತಗಿರಿ ನಿಯಮಗಳನ್ನು ಪಾಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ತನಿಖೆ ನಡೆಸಿ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.

Related News

error: Content is protected !!