ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ (15) ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿರುವ ಶಿಕ್ಷಕ ಹಾಗೂ ವಸತಿ ನಿಲಯದ ಪ್ರಭಾರಿ ವಾರ್ಡನ್ ಅಬ್ಬು ತಲಹ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 9ರಂದು ಗೋಕುಲ ಕೃಷ್ಣ ಗೌಡ ಸಾವನ್ನಪ್ಪಿದ್ದ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ನಂತರ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಮೃ.ta ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಸವಿಸ್ತಾರ ತನಿಖೆ ಕೈಗೊಂಡಿದ್ದರು.
ತನಿಖೆ ವೇಳೆ, ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅಬ್ಬು ತಲಹ್ ಅನುಚಿತವಾಗಿ ವರ್ತಿಸಿದ್ದರೆಂಬ ಆರೋಪ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಗೋಕುಲ ಗೌಡ ನೋಡಿದ್ದು, ಬಳಿಕ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅಲ್ಲದೇ, ಅಬ್ಬು ತಲಹ್ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗೋಕುಲ ಗೌಡ ಸಾವಿಗೂ ಮುನ್ನ ತಾಯಿಯ ಬಳಿ ಹೇಳಿಕೊಂಡಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಗೋಕುಲ ಸಾವಿನ ದಿನ ವಸತಿ ಶಾಲೆಯಲ್ಲಿ ವಿದ್ಯುತ್ ಕಡಿತವಾಗಿದ್ದ ಸಂಗತಿ ಸೇರಿದಂತೆ ಹಲವು ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿತ್ತು. ಶಿಕ್ಷಕರ ವರ್ತನೆ ಮತ್ತು ಗೋಕುಲನ ಮೇಲೆ ನಡೆದಿದ್ದ ಹಲ್ಲೆ ಕುರಿತ ಮಾಹಿತಿಯನ್ನು ಮೃta ವಿದ್ಯಾರ್ಥಿಯ ತಾಯಿ ಪೊಲೀಸರಿಗೆ ನೀಡಿದ್ದು, ಇದೇ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಸಿದ್ದಾಪುರದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜನರ ಒತ್ತಡ ಮತ್ತು ತನಿಖೆಯಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು.
ಮೂರು ಪೊಲೀಸ್ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದು, ಕಾರವಾರ ಡಿವೈಎಸ್ಪಿ ಗಿರೀಶ್ ಅವರ ನೇತೃತ್ವದಲ್ಲಿ ಆರೋಪಿ ಶಿಕ್ಷಕ ಅಬ್ಬು ತಲಹ್ ಅವರನ್ನು ಶನಿವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.
ಗೋಕುಲ ಕೃಷ್ಣ ಗೌಡ ಸಾವಿನ ಹಿಂದಿರುವ ನೈಜ ಕಾರಣ ಮತ್ತು ಘಟನೆಯ ಸಂಪೂರ್ಣ ಸತ್ಯಾಂಶವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕರಣ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
