ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು, ಬಾಡಿಗೆಗೆ ವಾಸವಿದ್ದ ದಂಪತಿಯನ್ನು ಬಂಧಿಸಿದ್ದಾರೆ.

ನಿವೃತ್ತ ಶಿಕ್ಷಕರಾದ ನಾಗಯ್ಯ ಹಾಗೂ ಮಂಜುಳಾ ದಂಪತಿ ಜೂನ್ 13ರಂದು ತಮ್ಮ ಮನೆಯನ್ನು ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಇದೇ ವೇಳೆ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಮಂಜುನಾಥ್ ಮತ್ತು ನಯನ ದಂಪತಿ, ಮನೆಯಲ್ಲಿ ಯಾರೂ ಇಲ್ಲದ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಕಳ್ಳತನ ಎಸಗಿದ್ದಾರೆ ಎನ್ನಲಾಗಿದೆ.

ಮನೆಯ ಬೀರುವಿನಲ್ಲಿ ಇಡಲಾಗಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣವನ್ನು ಆರೋಪಿಗಳು ಕಳವು ಮಾಡಿದ್ದು, ಬಳಿಕ ಅದನ್ನು ‘ಅರ್ಟಿಕ್ ಗೋಲ್ಡ್ ಫೈನಾನ್ಸ್’ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಕಳವಾದ ಚಿನ್ನವನ್ನು ಸುಮಾರು 6 ರಿಂದ 8 ಲಕ್ಷ ರೂಪಾಯಿವರೆಗೆ ಮಾರಾಟ ಮಾಡಿ ಹಣವನ್ನು ಬಚ್ಚಿಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಜೂನ್ 21ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟು ಕೊನೆಗೆ ಮಂಜುನಾಥ್ ಮತ್ತು ನಯನ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂಬಿಕೆ ಇಟ್ಟು ಮನೆಯಲ್ಲಿ ಬಾಡಿಗೆಗೆ ಇರಿಸಿದ್ದ ದಂಪತಿಯೇ ಮನೆ ಮಾಲೀಕರಿಗೆ ವಂಚನೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!