ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್ ಹಾಗೂ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ/ಮಾಲಕರ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಶಿರಸಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆಗಳು ಮೋಟಾರು ವಾಹನ ಕಾಯ್ದೆ-1988ರ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘ ಆರೋಪಿಸಿದೆ. Motor Vehicles Act, 1988ರ ಸೆಕ್ಷನ್ 2(47)ರ ಪ್ರಕಾರ ಸಾರಿಗೆ ವಾಹನಗಳಿಗೆ ಸೂಕ್ತ ಪರವಾನಗಿ ಅಗತ್ಯವಾಗಿದ್ದು, ಪರವಾನಗಿ ಇಲ್ಲದೆ ಬೈಕ್‌ಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಸೆಕ್ಷನ್ 39 ಹಾಗೂ 66ರ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲೆಯಲ್ಲಿ ಸುಮಾರು 7,000ಕ್ಕೂ ಹೆಚ್ಚು ಆಟೋ ರಿಕ್ಷಾ ಹಾಗೂ 1,000ಕ್ಕೂ ಹೆಚ್ಚು ಕ್ಯಾಬ್ ಚಾಲಕರು ಜೀವನೋಪಾಯಕ್ಕಾಗಿ ಈ ವೃತ್ತಿಯನ್ನು ಅವಲಂಬಿಸಿದ್ದಾರೆ. ಬೈಕ್ ಟ್ಯಾಕ್ಸಿ ಸೇವೆಗಳ ಹೆಚ್ಚಳದಿಂದ ಅವರ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘ ತಿಳಿಸಿದೆ.

ಪರವಾನಗಿ, ಸೂಕ್ತ ವಿಮೆ ಹಾಗೂ ಇತರೆ ಅಗತ್ಯ ದಾಖಲೆಗಳಿಲ್ಲದೆ ಪ್ರಯಾಣಿಕರನ್ನು ಸಾಗಿಸಲಾಗುತ್ತಿದ್ದು, ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ಸಂಘ ಎತ್ತಿದೆ.

ಈ ಸಂಬಂಧ ಈಗಾಗಲೇ 2026ರ ಫೆಬ್ರವರಿ 12ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಮ್ಮೆ ತುರ್ತು ಕ್ರಮಕ್ಕೆ ಆಗ್ರಹಿಸಲಾಗಿದೆ.

ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣ ನಿಷೇಧಿಸುವುದು, ಓಲಾ, ಉಬರ್ ಹಾಗೂ ರಾಪಿಡೋ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು, ಬಿಳಿ ಬೋರ್ಡ್ ಬೈಕ್‌ಗಳಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುವವರ ವಿರುದ್ಧ ಪ್ರಕರಣ ದಾಖಲಿಸಿ ವಾಹನಗಳನ್ನು ಜಪ್ತಿ ಮಾಡುವುದು ಹಾಗೂ ಆಟೋ ಚಾಲಕರ ಹಿತಾಸಕ್ತಿ ಕಾಪಾಡುವಂತೆ ಸ್ಪಷ್ಟ ಆದೇಶ ಹೊರಡಿಸುವಂತೆ ಸಂಘವು ಮನವಿ ಮಾಡಿದೆ.

ಈ ಮನವಿಯ ಪ್ರತಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಕಾರವಾರ, ಶಿರಸಿ ಸಹಾಯಕ ಆಯುಕ್ತರು, ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

Related News

error: Content is protected !!