ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿರಸಿ ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ ಜ್ಯೋತಿ ಅಲಿಯಾಸ್ ಸಂಜನಾ ವೆಂಕಟೇಶ ಪಸಪುಲೇಟ್ (32) ಎಂದು ಗುರುತಿಸಲಾಗಿದೆ.

ಜೂನ್ 3ರಂದು ಚಂದ್ರಗುತ್ತಿಯ ನಿವಾಸಿ ಸವಿತಾ ಆನಂದ ನಾಯ್ಕ ಅವರು ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿದ್ದ ವೇಳೆ ಅವರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಆರೋಪಿತೆ ಕಳವು ಮಾಡಿದ್ದಳು. ಕಳುವಾದ ಆಭರಣಗಳಲ್ಲಿ ಸುಮಾರು 20 ಗ್ರಾಂ ತೂಕದ ಬಂಗಾರದ ಲವಂಗದ ಸರ ಹಾಗೂ 10 ಗ್ರಾಂ ತೂಕದ ಒಂದು ಜೋಡಿ ಬಂಗಾರದ ಕಿವಿಯೊಲೆ ಸೇರಿ ಒಟ್ಟು ಸುಮಾರು 1.59 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು.

ಪ್ರಕರಣ ದಾಖಲಿಸಿಕೊಂಡ ಶಿರಸಿ ನಗರ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಕುಮಾರ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನರಸಿಂಹಲು ಮತ್ತು ನಾರಾಯಣ ರಾಥೋಡ್ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಕಾಪುರ್, ಸದ್ದಾಂ ಹುಸೇನ್, ಚನ್ನಬಸಪ್ಪ ಕೆ., ರಾಜು ಎಂ., ಸುನೀಲ್, ಪ್ರಶಾಂತ್, ಶಂಕರಮ್ಮ, ದೀಪಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!